ACB Raid: 28 ಮನೆಗಳು , 16 ಸೈಟ್‌ಗಳು, 31.20 ಕೋಟಿ ಮೌಲ್ಯದ ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್‌

Nov 29, 2021, 5:35 PM IST

ಬೆಂಗಳೂರು (ನ. 29):  ನಗರದ ಸುತ್ತಮುತ್ತ 28 ಮನೆಗಳು ಹಾಗೂ 16 ನಿವೇಶನಗಳು ಸೇರಿದಂತೆ ಅಕ್ರಮವಾಗಿ .31.20 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿ ಸಿಕ್ಕಿಬಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ (Bengaluru Rural) ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್‌.ಎನ್‌.ವಾಸುದೇವ್‌ (RN Vasudev) ಅವರನ್ನು ಎಸಿಬಿ (ACB) ಬಂಧಿಸಿದೆ. 

ನಾಲ್ಕು ದಿನಗಳ ಹಿಂದೆ ಅವರ ಅಕ್ರಮ ‘ಸಂಪತ್ತಿನ ಗಣಿ’ ಮೇಲೆ ದಾಳಿ ನಡೆಸಿದ್ದ ಎಸಿಬಿ, ವಾಸುದೇವ್‌ ಬಳಿ ಆದಾಯಕ್ಕಿಂತ ಶೇ. 1434 ರಷ್ಟುಅಧಿಕ ಅಕ್ರಮ ಸಂಪತ್ತು ಪತ್ತೆ ಹಚ್ಚಿತ್ತು. ಆ ಬಳಿಕ ವಾಸುದೇವ್‌ ಬಳಿ ಬೆಂಗಳೂರಿನಲ್ಲಿರುವ ಆಸ್ತಿಯಲ್ಲದೆ ರಾಮನಗರ (Ramanagar) ಜಿಲ್ಲೆ ಮಾಗಡಿ ತಾಲೂಕಿನ ಗೊಲ್ಲರಪಾಳ್ಯದಲ್ಲಿ 6.20 ಎಕರೆ ಹಾಗೂ ರಾಮನಗರ ತಾಲೂಕಿನ ಫಾಲಬೋವಿದೊಡ್ಡಿ ಗ್ರಾಮದಲ್ಲಿ 10 ಗುಂಟೆ ಜಾಗ ಪುತ್ರನ ಹೆಸರಿನಲ್ಲಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೆಂಗೇರಿ ಉಪ ನಗರ, ಮಲ್ಲೇಶ್ವರ, ನೆಲಮಂಗಲದ ಸೋಂಪುರ (ದಾಬಸಪೇಟೆ), ಅರ್ಕಾವತಿ ಬಡಾವಣೆ, ಯಲಹಂಕ ಉಪನಗರ, ವಿಶ್ವೇಶ್ವರಯ್ಯ ಬಡಾವಣೆ ಹಾಗೂ ಜ್ಞಾನಭಾರತಿಗಳಲ್ಲಿ ವಾಸುದೇವ್‌ ಅವರು ಸಂಪಾದಿಸಿದ್ದ 16 ನಿವೇಶನಗಳು ಪತ್ತೆಯಾಗಿವೆ. ಅಬ್ಬಬ್ಬಾ...ಕೋಟಿ ಕುಬೇರ ಅಂದ್ರೆ ಇವರೇ ನೋಡಿ.