Aug 20, 2019, 11:49 AM IST
ಬೆಂಗಳೂರು[ಆ.20]: ಎಲ್ಲಿಯ ಕ್ರಿಕೆಟ್? ಎಲ್ಲಿಯ ಯಕ್ಷಗಾನದ ಚೆಂಡೆ? ಹೀಗೆಂದು ಪ್ರಶ್ನಿಸಬೇಡಿ. ಆಸ್ಪ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಲೆಗ್‌ಸ್ಪಿನರ್ ಬ್ರಾಡ್ ಹಾಗ್, ಬಾಲ್ ಹಿಡಿವ ಕೈಯಲ್ಲಿ ಕೋಲು ಹಿಡಿದು ಚೆಂಡೆವಾದನ ನಡೆಸುವ ಮೂಲಕ ಯಕ್ಷಗಾನ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದರು. ಇದೇ ವೇಳೆ ಧೀಂಗಿಣ ತೆಗೆದು ಸೈ ಅನ್ನಿಸಿಕೊಂಡರು. ಈಗ ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವಿವಿ ಪುರಂ ಕಾಲೇಜಿನಲ್ಲಿ ಪ್ರತಿ ಭಾನುವಾರ ಸಂಕೃತಿ ಯಕ್ಷಾನುಭವ ತಂಡದಿಂದ ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ಹಿಮ್ಮೇಳ ಹಾಗೂ ಮುಮ್ಮೇಳದ ತರಬೇತಿ ನಡೆಯುತ್ತಿದೆ. ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ಟೂರ್ನಿಯಲ್ಲಿ ಕ್ರೀಡಾ ಚಾನೆಲ್‌ಗೆ ವೀಕ್ಷಕ ವಿವರಣೆಗೆ ಕಾರ್ಯನಿರ್ವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಬ್ರಾಡ್ ಹಾಗ್ ಈ ಶಿಬಿರಕ್ಕೆ ಭಾನುವಾರ ಹಠಾತ್ ಭೇಟಿ ನೀಡಿದರು.
ಚೆಂಡೆ ಬಾರಿಸಿದರು, ಕುಣಿದರು: ತೆಂಕುತಿಟ್ಟಿನ ಹಿರಿಯ ಹಿಮ್ಮೇಳವಾದಕ ಅಡೂರು ಮೋಹನ ಸರಳಾಯ ಅವರು ಬಾರಿಸುತ್ತಿದ್ದ ಚೆಂಡೆ ವಾದನಕ್ಕೆ ತಲೆದೂಗಿದ ಹಾಗ್, ಬಳಿಕ ತಾನೂ ಚೆಂಡೆಯನ್ನು ಹೆಗಲಿಗೇರಿಸಿ ಎರಡೂ ಕೈಗಳಿಂದ ಕೋಲು ಹಿಡಿದು ವಾದನ ನಡೆಸಿ ಅಲ್ಲಿದ್ದವರಿಂದ ಭೇಷ್ ಎನಿಸಿಕೊಂಡರು.