ಮುತ್ತುರಾಜನ ಹಾದಿಯಲ್ಲಿಯೇ ನಡೆದ ಅಪ್ಪು: ಪುನೀತ್ ರಾಜ್‌ಕುಮಾರ್ ಇನ್ನು ಕರ್ನಾಟಕ ರತ್ನ

Nov 17, 2021, 1:19 PM IST

ಬೆಂಗಳೂರು (ನ.17):  ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್  (Puneeth Rajkumar) ಅವರಿಗೆ ಇಡೀ ಜಗತ್ತು ನಮನ ಸಲ್ಲಿಸಿದ್ದು, ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪುರಸ್ಕಾರವನ್ನು ಕರ್ನಾಟಕ ರಾಜ್ಯ (Karnataka Govt) ಸರ್ಕಾರ ಘೋಷಿಸಿದೆ. ಈ ಅತ್ಯುನ್ನತ ನಾಗರಿಕ ಪುರಸ್ಕಾರ ಕರ್ನಾಟಕ ರತ್ನಕ್ಕೆ ಭಾಜನರಾದ 10ನೇ ವ್ಯಕ್ತಿ ಹಾಗೂ ಮರಣೋತ್ತರವಾಗಿ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಮೊದಲ ವ್ಯಕ್ತಿ ಕೂಡಾ ಹೌದು. ಈ ಪ್ರಶಸ್ತಿಯನ್ನು ಈವರೆಗೆ ಒಂಬತ್ತು ಗಣ್ಯರಿಗೆ ನೀಡಲಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಕಡೆಯದಾಗಿ ನೀಡಲಾಗಿತ್ತು.

Puneeth Rajkumar ಪ್ರೇರಣೆ: ನೇತ್ರದಾನದಲ್ಲಿ ದಾಖಲೆಯ ಏರಿಕೆ

ಯಾವುದೇ ಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟ ಸೇವೆ ಸಲ್ಲಿಸಿರುವ ಗಣ್ಯರಿಗೆ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ 1992ರಿಂದ 'ಕರ್ನಾಟಕ ರತ್ನ' ಪ್ರಶಸ್ತಿ ಸ್ಥಾಪಿಸಿತು. ಮೊದಲ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಾಗಿ ರಾಷ್ಟ್ರಕವಿ ಕುವೆಂಪು ಹಾಗೂ ಸಿನಿಮಾ ಮತ್ತು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ 'ನಟಸಾರ್ವಭೌಮ' ಡಾ. ರಾಜಕುಮಾರ್‌ ಅವರಿಗೆ 1992ರಲ್ಲಿ ಪ್ರದಾನ ಮಾಡಲಾಯಿತು. ಇದೀಗ ಮರಣೋತ್ತರವಾಗಿ ಪುನೀತ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದ್ದು, ಅಪ್ಪನ ಹಾದಿಯಲ್ಲಿಯೇ ನಡೆದಿದ್ದಾರೆ. ಇನ್ನು ಅಪ್ಪು ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ ಎರಡನೇ ವ್ಯಕ್ತಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment