Party Rounds: ಮೋದಿ ವಿಷಸರ್ಪ: ಖರ್ಗೆ ಹೇಳಿಕೆಗೆ ಬಿಜೆಪಿ ನಾಯಕರು ಕೆಂಡಾಮಂಡಲ

Apr 28, 2023, 8:24 PM IST

ಬೆಂಗಳೂರು (ಏ.28): ‘ಪ್ರಧಾನಿ ನರೇಂದ್ರ ಮೋದಿ ವಿಷದ ಹಾವು’ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಿಎಂ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ, ಪ್ರಹ್ಲಾದ್‌ ಜೋಶಿ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಖರ್ಗೆ ಹೇಳಿಕೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಖರ್ಗೆಯವರು ತಮ್ಮ ಹೇಳಿಕೆ ಕುರಿತು ಮೋದಿಯವರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಗದಗ ಜಿಲ್ಲೆಯ ನರೇಗಲ್‌ನಲ್ಲಿ ಗುರುವಾರ ಪ್ರಚಾರ ಭಾಷಣ ಮಾಡುವ ವೇಳೆ ಖರ್ಗೆಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಷದ ಹಾವು’ ಎಂದು ಹೇಳಿದ್ದರು. 

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಖರ್ಗೆ ಆಡಿರುವ ಮಾತುಗಳು ಕಾಂಗ್ರೆಸ್ಸಿಗರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತವೆ. ಹೀಗೆ ಮಾತನಾಡಿಯೇ ಕಾಂಗ್ರೆಸ್‌ ಈ ಮಟ್ಟಕ್ಕೆ ಬಂದಿದೆ. ಕಾಂಗ್ರೆಸ್ಸಿನವರಿಗೆ ಅಧಿಕಾರದ ಅಮಲು ಇನ್ನೂ ಇಳಿದಿಲ್ಲ. ಕರ್ನಾಟಕ ಸುಸಂಸ್ಕೃತ ನಾಡು. ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಖರ್ಗೆ ಅವರ ವಿಚಾರಗಳ ಬಗ್ಗೆ ವಿರೋಧ ಇದ್ದರೂ ಅವರ ಹಿರಿತನಕ್ಕೆ ನಾವು ಗೌರವ ಕೊಡುತ್ತೇವೆ. ಹಿರಿಯರಾಗಿ ಅವರು ಈ ರೀತಿ ಮಾತನಾಡಿದ್ದು ಖೇದಕರ ಎಂದು ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.