ದುಡುಕಿನ ನಿರ್ಧಾರ ತೆಗೆದುಕೊಂಡಿಲ್ಲ, ಎಲ್ಲಾ ಜಾತಿ- ಧರ್ಮದವರಿಗೆ ನನ್ನ ಅಭಿನಂದನೆಗಳು: ಹಾಲಾಡಿ ಶ್ರೀನಿವಾಸ ಶೆಟ್ಟಿ

Apr 6, 2023, 3:47 PM IST

ಉಡುಪಿ (ಏ.06): ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಗೆದ್ದು ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಬಿಜೆಪಿಯಿಂದ 5 ಬಾರಿ ಶಾಸಕರಾದರು, ಮಂತ್ರಿ ಸ್ಥಾನ ಹಾಲಾಡಿಯವರಿಗೆ ಸಿಗಲಿಲ್ಲ. ಸ್ಥಿತಪ್ರಜ್ಞ ರಾಜಕಾರಣ ನಡೆಸಿರುವ ಹಾಲಾಡಿ, ಕುಂದಾಪುರದ ವಾಜಪೇಯಿ ಅಂತಲೇ ಪ್ರಸಿದ್ಧರಾಗಿದ್ದರು. ಈಗ ಅವರ ಅನಿರೀಕ್ಷಿತ ನಿರ್ಧಾರ, ಕರಾವಳಿಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಹಾಲಾಡಿ ಅವರ ಜೊತೆ ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ಚಿಟ್ ಚಾಟ್ ಇಲ್ಲಿದೆ. 

ಕುಂದಾಪುರದ ಜಾತಿ ಮತ ಧರ್ಮ ಮರೆತು ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಎಲ್ಲಾ ಜಾತಿ ಮತ ಧರ್ಮಕ್ಕೆ ನನ್ನ ಅಭಿನಂದನೆ. ಪಕ್ಷೇತರವಾಗಿ ನಿಂತಾಗಲೂ ಭಾವನೆಗೆ ಸ್ಪಂದಿಸಿ ಅಭೂತಪೂರ್ವ ಜಯ ಸಿಕ್ಕಿತು. 4 ಬಾರಿ ಬಿಜೆಪಿ, ಒಮ್ಮೆ ಪಕ್ಷೇತರ ನಿಂತಾಗ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ. ನಾನು 6 ತಿಂಗಳ ಹಿಂದೆಯೇ ಈ ನಿರ್ಧಾರ ಮಾಡಿದ್ದೆನು. ನೀತಿ ಸಂಹಿತೆ ಜಾರಿಯ ದಿನದ ತನಕ ಕೆಲಸ ಮಾಡಿದ್ದೇನೆ. ಮುಂದೆ ಬಿಜೆಪಿಯನ್ನು ಬೆಂಬಲಿಸಿ, ಅಭ್ಯರ್ಥಿ ಗೆಲ್ಲಿಸಬೇಕು ಎಂದು ನಿರ್ಣಯ ಕೈಗೊಂಡಿದ್ದೇನೆ ಎಂದು ತಿಳಿಸಿದರು.

ಕಿರಣ್‌ ಕೂಡ್ಗಿ ನಮಗೂ ಆಪ್ತ:  ಇನ್ನು ಕುಂದಾಪುರದ ಅಭ್ಯರ್ಥಿ ಯಾರೆಂದು ರಾಷ್ಟ್ರೀಯ ಮಟ್ಟದಲ್ಲಿ ನಿರ್ಣಯ ಆಗಬೇಕು. ಕಿರಣ್ ಕೊಡ್ಗಿ ನನ್ನ ತಮ್ಮನ ಆಪ್ತ, ತಂದೆಯ ಕಾಲದಿಂದ ಕುಟುಂಬದ ಆಪ್ತರು. ಬಿಜೆಪಿಯ ಅಭ್ಯರ್ಥಿಯನ್ನು ನಾನು ಬೆಂಬಲಿಸುತ್ತೇನೆ, ಪ್ರಕಟಣೆಯಲ್ಲೂ ದಾಖಲಿಸಿದ್ದೇನೆ. ರಾಜಕೀಯ ಜೀವನದ 25 ವರ್ಷ ಒಂದೇ ಮನಸ್ಸಿನಿಂದ ಎಲ್ಲಾ ಚುನಾವಣೆಯಲ್ಲಿ ಕೆಲಸ ಪರಿಶುದ್ಧತೆ ಸಹನೆ ಒಳ್ಳೆತನಕ್ಕೆ ಮೆಚ್ಚಿದ್ದೇವೆ. ನಮ್ಮ ನಡುವೆ ಒಂದು ಕೂದಲೆಳೆ ವೈಮನಸ್ಸು ಇಲ್ಲ. ಕಿರಣ್ ಕೊಡ್ಗಿಗೆ ಅವಕಾಶ ಕೊಟ್ಟರೆ ನಾನು ಖುಷಿ ಪಡುತ್ತೇನೆ. ನಾನು ದುಡುಕಿನ ನಿರ್ಧಾರ ತೆಗೆದಕೊಂಡಿಲ್ಲ ಮನಸ್ಸು ಚಂಚಲವಾಗಿಲ್ಲ. ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಲು ಹೇಳಿದ್ದರಿಂದ ಮಾತನಾಡಿದೆ. ಜಾಗೃತ ಮನಸ್ಸಿನಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.