May 23, 2023, 7:26 PM IST
ಬೆಂಗಳೂರು (ಮೇ 23): ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಸರ್ಕಾರ ರಚನೆಗೊಂಡು ಇನ್ನೂ ನಾಲ್ಕು ದಿನವೂ ಕಳೆದಿಲ್ಲ. ಸಚಿವರಿಗೆ ಖಾತೆಯೂ ಕೂಡ ಹಂಚಿಕೆಯಾಗಿಲ್ಲ. ಇಷ್ಟು ಕಡಿಮೆ ಅವಧಿಯಲ್ಲಿ ಕಾಂಗ್ರೆಸ್‌ನಲ್ಲಿಯೇ ಕಿಚ್ಚು ಹೊತ್ತಿಸುವಂತಹ ಹೇಳಿಕೆಯನ್ನು ಕ್ಯಾಬಿನೆಟ್ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಈಗಾಗಲೇ ಸರ್ಕಾರದ ಬಗ್ಗೆ ಮಾತನಾಡಿದ್ದ ಎಂ.ಬಿ. ಪಾಟೀಲ್‌ಗೆ ಸುಮ್ಮನಿರುವಂತೆ ಡಿ.ಕೆ. ಶಿವಕುಮಾರ್ ಎಚ್ಚರಿಕೆಯನ್ನೂ ರವಾನಿಸಿದ್ದರು. ಆದರೂ, ಅವರಿಗೆ ಕ್ಯಾರೇ ಎನ್ನದೇ 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂಬರ್ಥದಲ್ಲಿ "ಪವರ್ ಶೇರಿಂಗ್" ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸಿಎಂ ತಾನೇ ಆಗಬೇಕೆಂದು ಹಠ ಹಿಡಿದಿದ್ದರೂ ಕೊನೆಗೆ ಹೈಕಮಾಂಡ್ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದ ಡಿ.ಕೆ. ಶಿವಕುಮಾರ್‌ಗೆ 30 ತಿಂಗಳ ಅವಧಿಗೆ ಸಿಎಂ ಸ್ಥಾನ ಕೊಡುವುದಾಗಿ ಹೇಳಲಾಗಿದೆಯಂತೆ. ಆದರೆ, ಈಗ ಎಂ.ಬಿ. ಪಾಟೀಲ್ ಹೇಳಿಕೆ ಮಾತ್ರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಸೆಗೆ ತಣ್ಣೀರು ಎರಚುವಂತಿದೆ. ಈಗ ಇಡೀ ರಾಜ್ಯದಲ್ಲಿಯೇ ಕಾಂಗ್ರೆಸ್‌ನಲ್ಲಿ ಪರ ವಿರೋಧ ಆರಂಭವಾಗಿದೆ.