
ಕಳೆದ ಲೋಕಸಭಾ ಚುನಾವಣೆಯ ವೇಳೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ. ಈ ಕುರಿತು ಶೀಘ್ರವೇ ನಾನು ಆಟಂ ಬಾಂಬ್ ಸ್ಫೋಟಿಸಲಿದ್ದೇನೆ ಎಂದು ಇತ್ತೀಚೆಗೆ ಹೇಳಿದ್ದ ರಾಹುಲ್ ಗಾಂಧಿ, ತಮ್ಮ ಆರೋಪಗಳಿಗೆ ಪೂರಕವಾದ ಅಂಕಿ ಅಂಶಗಳನ್ನು ಗುರುವಾರ ಬಹಿರಂಗಪಡಿಸಿದ್ದಾರೆ.
‘ಮಹದೇವಪುರ ಕ್ಷೇತ್ರದಲ್ಲಿ 5 ಮಾದರಿಯ ಅಕ್ರಮಗಳ ಮೂಲಕ 1 ಲಕ್ಷ ಮತಗಳ್ಳತನ ನಡೆದಿದೆ. ಚುನಾವಣಾ ಫಲಿತಾಂಶ ತಿರುಚಲು ಚುನಾವಣಾ ಆಯೋಗವೂ ಬಿಜೆಪಿ ಜತೆ ಸೇರಿಕೊಂಡಿದೆ. ಇದು ಸಂವಿಧಾನದ ವಿರುದ್ಧದ ಅಪರಾಧ’ ಎಂದು ರಾಹಲ್ ಗಂಭೀರ ಆರೋಪ ಮಾಡಿದ್ದಾರೆ. ನಾವು ಬಹುವಾಗಿ ಪ್ರೀತಿಸುವ ಪ್ರಜಾಪ್ರಭುತ್ವವೇ ಇದೀಗ ಅಸ್ತಿತ್ವದಲ್ಲೇ ಇಲ್ಲದ ಕಾರಣ ಈ ಪ್ರಕರಣದಲ್ಲಿ ನ್ಯಾಯಾಂಗದ ಮಧ್ಯಪ್ರವೇಶದ ಅಗತ್ಯವಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಆಗ್ರಹಿಸಿದ್ದಾರೆ.