May 15, 2023, 8:59 PM IST
ಬೆಂಗಳೂರು (ಮೇ.15): ಮುಖ್ಯಮಂತ್ರಿ ಕುರ್ಚಿಗಾಗಿ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೆ ಡಿಸಿಎಂ ಸ್ಥಾನಕ್ಕೆ ಕೂಡ ಪಟ್ಟು ಶುರುವಾಗಿದೆ. ಡಿಸಿಎಂ ಸ್ಥಾನಕ್ಕಾಗಿ ಅಲ್ಪಸಂಖ್ಯಾತರ ಕೂಗು ಜೋರಾಗಿದೆ. ಮುಸ್ಲಿಂ ಸಮುದಾಯಕ್ಕೆ ಭಾರೀ ಅನ್ಯಾಯವಾಗ್ತಿದೆ, ಡಿಸಿಎಂ ಸ್ಥಾನ ಕೊಡಿ ಎಂದು ಮುಸ್ಲಿಂ ಧರ್ಮಗುರುಗಳು ಪಟ್ಟು ಹಿಡಿದಿದ್ದಾರೆ. 1 ಡಿಸಿಎಂ ಸ್ಥಾನ, 6 ಸಚಿವ ಸ್ಥಾನಕ್ಕೆ ಮುಸ್ಲಿಂ ಸಮುದಾಯ ಬೇಡಿಕೆಯಿಟ್ಟಿದೆ. ಏಷ್ಯಾನೆಟ್ ಸುವರ್ಣನ್ಯೂಸ್ಗೆ ವಕ್ಫ್ ಬೋರ್ಡ್ ಅಧ್ಯಕ್ಷ ಸಫಿ ಶಾ ಅದಿ ಹೇಳಿಕೆ ನೀಡಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಸಲ್ಮಾನರೇ ಪ್ರಮುಖ ಕಾರಣ. ಎಸ್ ಸಿ ಎಸ್ಟಿಗಳನ್ನು ಹೊರತುಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಂಖ್ಯೆ ಹೊಂದಿರೋದು ಮುಸ್ಲಿಂ ಸಮುದಾಯ. ಅವರ ಲೆಕ್ಕಾರದ ಪ್ರಕಾರ 80ಲಕ್ಷ 16% ಮುಸಲ್ಮಾನರಿದ್ದೇವೆ. ನಮ್ಮ ಲೆಕ್ಕಾಚಾರದ ಪ್ರಕಾರ 95ರಿಂದ 1ಕೋಟಿ ಜನರಿದ್ದೇವೆ. ಅಧಿಕೃತ ಲೆಕ್ಕಾಚಾರದ ಪ್ರಕಾರ ಲಿಂಗಾಯತ ಹಾಗೂ ಒಕ್ಕಲಿಗರಿಗಿಂತ ಮೂರು ಪಟ್ಟು ಹೆಚ್ಚು ಜನಸಂಖ್ಯೆ ನಮ್ಮಲ್ಲಿದೆ. ಆದ್ರೂ ರಾಜ್ಯದಲ್ಲಿ ಇದುವರೆಗೂ ಸಿಎಂ ಡಿಸಿಎಂ ಆಗಿಲ್ಲ ಅನ್ನೋದು ಬೇಸರದ ಸಂಗತಿ. 88% ಮತ ಹಾಕಿದ್ದೇ ಮುಸಲ್ಮಾನರು, ಕುರುಬ, ಒಕ್ಕಲಿಗ ಸಮುದಾಯದವ್ರು ಶೇಕಡಾವಾರು ಮತದಾನ ಹರಿದು ಹಂಚಿಹೋಗಿದೆ. 4% ಮೀಸಲಾತಿಯನ್ನು ನೀಡುವ ಭರವಸೆ ಕಾಂಗ್ರೆಸ್ ಭರವಸೆ ನೀಡಿತ್ತು. ಭರವಸೆ ಈಡೇರಿಸ್ತಾರೆ ಅನ್ನೋ ನಂಬಿಕೆ ಇದೆ ಎಂದಿದ್ದಾರೆ.