May 4, 2023, 5:37 PM IST
ಬೆಂಗಳೂರು (ಮೇ.04): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 6ರಂದು ಬೆಂಗಳೂರು ನಗರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಟ್ಟು 37 ಕಿ.ಮೀ ರೋಡ್ ಶೋ ನಡೆಸಲು ಮುಂದಾಗಿದ್ದರು. ಆದರೆ, ರೋಡ್ ಶೋ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಮೇ6 ಮತ್ತು ಮೇ 7ರಂದು ಎರಡು ದಿನಗಳ ಅವಧಿಯಲ್ಲಿ ರೋಡ್ ಶೋ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿ ಭರ್ಜರಿ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ.
ಇನ್ನು ಸಭೆಯನ್ನು ಮುಗಿಸಿದ ಬಳಿಕ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು, ಮೆ 6 ಮತ್ತು 7 ರಂದು ಬೆಂಗಳೂರಲ್ಲಿ ರೋಡ್ ಶೋ ಮಾಡಲಿದ್ದಾರೆ. ನಮ್ಮೆಲ್ಲ ಕಾರ್ಯಕರ್ತರ ಅಪೇಕ್ಷೇ ಇತ್ತು, ಮೋದಿಯವರಿಗೂ ವಿನಂತಿ ಕೂಡ ಮಾಡಿದ್ದೆವು. ಆದರೆ ನಾನು ಬರೋದ್ರಿಂದ ಟ್ರಾಫಿಕ್ ಜಾಮ್ ಆಗಬಾರದು ಯಾವುದಕ್ಕಾದರೂ ಒಂದಕ್ಕೆ ಬರ್ತೇನೆ ಎಂದಿದ್ದರು. ಆದರೆ ಈಗ ಎರಡು ಕಡೆಗಳಲ್ಲಿ ರೋಡ್ ಶೋಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಮೇ 6 ರಂದು 10 ಕಿ.ಮಿ. ಮತ್ತು 7 ರಂದು 26 ಕಿಮಿ ರೋಡ್ ಶೋ ಮಾಡುತ್ತಾರೆ. ಬೆಂಗಳೂರಿನ ಬೀದಿಯಲ್ಲಿ ನರೇಂದ್ರ ಮೋದಿ ಅವರು ಸಂಚಾರ ಮಾಡಲಿದ್ದಾರೆ. ಸುಮಾರು 10 ಲಕ್ಷ ಜನರು ಮೋದಿ ಅವರನ್ನು ನೋಡೋಕೆ ಬರ್ತಾರೆ ಅನ್ನೋ ನಿರೀಕ್ಷೆ ಇದೆ ಎಂದು ಹೇಳಿದರು.