Apr 26, 2023, 5:00 PM IST
ಬೆಳಗಾವಿ (ಏ.26): ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಸ್ಪರ ಭೇಟಿಯಾದರು. ಈ ವೇಳೆ ಇಬ್ಬರೂ ನಗು ನಗುತ್ತಲೇ ಹಸ್ತಲಾಘವ ಮಾಡಿಕೊಂಡು ಕುಶಲೋಪರಿಯನ್ನು ವಿಚಾರಿಸಿಕೊಂಡರು. ನಂತರ, ಚುನಾವಣಾ ಪ್ರಚಾರ ಕಾರ್ಯಗಳ ಬಗ್ಗೆ ವಿಚಾರಣೆ ಮಾಡಿಕೊಳ್ಳುತ್ತಾ, ಮುಂದೆ ತಾವು ಪ್ರಚಾರ ಕಾರ್ಯಕ್ಕೆ ಹೋಗುವ ವಿವರವನ್ನು ಪಡೆದರು. ಇನ್ನು ಬಸವರಾಜ ಬೊಮ್ಮಾಯಿ ಅವರು ಹೊರಡುವಾಗ ಅವರಿಗೆ ಸಿದ್ದರಾಮಯ್ಯ ಅವರು ಬೆನ್ನು ತಟ್ಟಿ ಕಳುಹಿಸಿಕೊಟ್ಟರು. ಇದೇ ವೇಳೆ ಸಿದ್ದರಾಮಯ್ಯ ಅವರ ಸ್ವಲ್ಪ ದೂರದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡ ಆಗಮಿಸಿದರು.
ಮಾಜಿ ಸಿಎಂ ಸಿದ್ದರಾಮಯಯ ಅವರು ಲಿಂಗಾಯತ ಮುಖ್ಯಮಂತ್ರಿ ಭ್ರಷ್ಟರು ಎಂದು ಹೇಳಿಕೆ ನೀಡಿರುವುದು ರಾಜ್ಯಾದ್ಯಂತ ವಿವಾದವನ್ನು ಸೃಷ್ಟಿಸಿದೆ. ಇದಕ್ಕೆ ಸ್ಪಷ್ಟೀಕರಣ ಕೊಡುವ ನಿಟ್ಟಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಹೇಳಿರುವುದಾಗಿ ತಿಳಿಸಿದ್ದರು. ಆದರೆ, ಈಗ ಭ್ರಷ್ಟ ಸಿಎಂ ಆರೋಪ ಮಾಡಿರುವ ಸಿದ್ದರಾಮಯ್ಯ ಹಾಗೂ ಆರೋಪಕ್ಕೆ ಗುರಿಯಾದ ಸಿಎಂ ಬಸವರಾಜ ಬೊಮ್ಮಾಯಿ ಒಂದೇ ಕಡೆ ಭೇಟಿಯಾಗಿ ಕುಶಲೋಪರಿ ವಿಚಾರಣೆ ಮಾಡಿದ್ದು, ರಾಜಕಾರಣದಲ್ಲಿ ಕೌತುಕ ಮೂಡಿಸಿದೆ.