Jul 15, 2022, 10:39 PM IST
ಬೆಂಗಳೂರು (ಜು. 15): ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸುತ್ತಿರುವ ಆಡಳಿತಾರೂಢ ಬಿಜೆಪಿ ಈಗ ಮತ್ತೆ ಚುನಾವಣಾ ಮೂಡ್‌ಗೆ ಬಂದಿದೆ. 2023ರ ಚುನಾವಣೆ ಎದುರಿಸಲು ಆಗಲೇ ಅಖಾಡಕ್ಕಿಳಿದ ರಾಜ್ಯ ಬಿಜೆಪಿಯಲ್ಲಿ ಇಂದಿನಿಂದ ಮ್ಯಾರಥಾನ್ ಮೀಟಿಂಗ್ ಶುರುವಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ಸಂಘಪರಿವಾರ ಮತ್ತು ಬಿಜೆಪಿ ನಾಯಕರ ಜಂಟಿ ಚಿಂತನಾ ಶಿಬಿರ ನಡೆಯಿತು. ಬಿಜೆಪಿ ಮೊದಲ ದಿನದ ಚಿಂತನಾ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಚಿಕ್ಕಬಳ್ಳಾಪುರದಲ್ಲಿ ಜುಲೈ 28ಕ್ಕೆ ಬಿಜೆಪಿ ಬೃಹತ್ ಸಾಧನಾ ಸಮಾವೇಶ ನಡೆಯಲಿದೆ. ಬೊಮ್ಮಾಯಿ ಸಿಎಂ ಆಗಿ ಒಂದು ವರ್ಷ ಹಿನ್ನೆಲೆ, ಬಿಜೆಪಿ ಸುಮಾರು 1 ಲಕ್ಷ ಕಾರ್ಯಕರ್ತರನ್ನು ಸೇರಿಸುವ ಟಾರ್ಗೆಟ್ ಹೊಂದಿದೆ. ಈ ಸಮಾವೇಶದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆ ತಿಳಿಸುವ ಪ್ರಯತ್ನ ಬಿಜೆಪಿ ಮಾಡಲಿದೆ.
ಇನ್ನು ಬಿಜೆಪಿ ಘಟಾನುಘಟಿ ನಾಯಕರು ಭಾಗಿಯಾಗಿ ಇಂದಿನ ಶಿಬಿರದಲ್ಲಿ ಚುನಾವಣೆ ಮಂತ್ರ ಪಠಿಸಿದ್ರು. ಮುಖ್ಯವಾಗಿ ಸರ್ಕಾರದ ಕಾರ್ಯವೈಖರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮಾಡಬೇಕಾದ ಕ್ರಮಗಳ ಕುರಿತು ಸಮಾಲೋಚನೆ ನಡೆಯಿತು. ಸಿಎಂ ಬೊಮ್ಮಾಯಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಪಾಳಯದ ದಿಗ್ಗಜ ನಾಯಕರು ಸರಕಾರದ ಕಾರ್ಯವೈಖರಿಯನ್ನು ಅವಲೋಕನ ಮಾಡಿದರು. ನಿರೀಕ್ಷಿತ ವೇಗದಲ್ಲಿ ಜನರ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಲು ಸರ್ಕಾರದ ವೇಗ ಹೆಚ್ಚಿಸಲು ಸಭೆಯಲ್ಲಿ ಸರ್ವಸಮ್ಮತ ಸಲಹೆ ನೀಡಲಾಯ್ತು.
ಬಿಜೆಪಿ-ಸಂಘಪರಿವಾರದ ಜಂಟಿ ಸಭೆಯಲ್ಲಿ ರಾಜ್ಯ ಸರ್ಕಾರದ ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಪ್ರಾಂತ್ಯ, ಜಿಲ್ಲೆಗಷ್ಟೇ ಸೀಮಿತವಾದ ಸಚಿವರ ನಡವಳಿಕೆಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು. ಕೆಲ ಸಚಿವರು ತಮ್ಮ ಈ ಕಾರ್ಯವೈಖರಿ ಬದಲಾಯಿಸಿಕೊಳ್ಳೋ ಅನಿವಾರ್ಯತೆಯಿದೆ ಎಂದು ಸಭೆಯಲ್ಲಿ ಸೂಚಿಸಲಾಯ್ತು.
ಇದನ್ನೂ ನೋಡಿ: ಇಂಡಿಯಾ ವಿಷನ್ 2047, ಇಸ್ಲಾಮಿಕ್ ಆಳ್ವಿಕೆ ಕಡೆಗೆ ಭಾರತ: ಪಿಎಫ್ಐ ಮಹಾ ಷಡ್ಯಂತ್ರ ಬಯಲು
ಇನ್ನು ಪ್ರತಿಪಕ್ಷಗಳಿಂದ ಆಗಾಗ್ಗೆ ಸರ್ಕಾರದ ಮೇಲೆ ವ್ಯಕ್ತವಾಗುತ್ತಿರುವ ಆರೋಪಗಳನ್ನು ಲಘುವಾಗಿ ಪರಿಗಣಿಸಬಾರದು. ಕೆಲಸದ ಮೂಲಕವೇ ತಿರುಗೇಟು ನೀಡಲು ಪ್ಲಾನ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹಿರಿಯ ನಾಯಕರ ಸಲಹೆಯಂತೆ ಸಕಾರಾತ್ಮಕ ಪರಿಣಾಮಗಳನ್ನು ಬೀರುವಂತಹ ಕಾರ್ಯಕ್ರಮಗಳನ್ನು ರೂಪಿಸಲು ಸೂಚನೆ ನೀಡಲಾಗಿದೆ. ಇನ್ನು ಚುನಾವಣಾ ವರ್ಷವಾಗಿರುವುದರಿಂದ ಪಕ್ಷದ ನಾಯಕರು, ಸಚಿವರು ಮತ್ತು ಶಾಸಕರು ಸಾರ್ವಜನಿಕವಾಗಿ ಅಶಿಸ್ತು ಪ್ರದರ್ಶಿಸಬಾರದು. ಪಕ್ಷಕ್ಕೆ ಕಳಂಕ ತರುವ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಕಟ್ಟಪ್ಪಣೆ ಮಾಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರೋದರಿಂದ ಪಕ್ಷಕ್ಕೆ ಅತಿಹೆಚ್ಚು ಶಾಸಕರನ್ನು ಕೊಟ್ಟಿರುವ ಬೆಂಗಳೂರು ನಗರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಚುನಾವಣೆ ನಡೆಸುವ ಕುರಿತು ತಕ್ಷಣವೇ ಸ್ಪಷ್ಟತೆಯನ್ನು ನೀಡಬೇಕಿದ್ದು, ಗೊಂದಲ ಪರಿಹಾರಕ್ಕೆ ಸರ್ಕಾರ ಮುಂದಾಗಲಿ ಎಂದು ಸಭೆಯಲ್ಲಿ ಸಲಹೆ ವ್ಯಕ್ತವಾಗಿದೆ.
ಪಕ್ಷ ಮತ್ತು ಸರ್ಕಾರದ ಮಧ್ಯೆ ಹೊಂದಾಣಿಕೆ ಮುಖ್ಯ. ಹೊಂದಾಣಿಕೆಯೊಂದಿಗೆ ಮತ್ತೊಂದು ಬಾರಿ ಜನತೆಯ ಆಶೀರ್ವಾದ ಪಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ದಿಗ್ವಿಜಯದ ಜಪ ಮಾಡಿದೆ.