ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ವಂಚಿತವಾಗಿ ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದ ಸೌರಭ್ ಚೋಪ್ರಾಗೆ ಜೆಡಿಎಸ್ ಟಿಕೆಟ್ ನೀಡಲು ಮುಂದಾಗಿದೆ.
ಬೆಳಗಾವಿ (ಏ.11): ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಕೆಲವೇ ಮತಗಳ ಸಂತರದಿಂದ ಸೋತಿದ್ದ ಆನಂದ ಚೋಪ್ರಾ ಅವರ ಪುತ್ರ ಸೌರಭ್ ಚೋಪ್ರಾಗೆ ಕಾಂಗ್ರೆಸ್ ಟಿಕೆಟ್ ಕೊಡದೇ ನಿರಾಕರಿಸಿದೆ. ಹೀಗಾಗಿ, ನೀವೇ ನನ್ನ ಮಗನ ಕೈಯನ್ನು ಹಿಡಿಯಬೇಕು ಎಂದು ಕಾಂತಾದೇವಿ ಆನಂದ್ ಚೋಪ್ರಾ ಬೆಂಬಲಿಗರ ಸಭೆಯಲ್ಲಿ ಕಣ್ಣೀರು ಹಾಕಿದ್ದರು. ಈಗ ಸೌರಭ್ ಚೋಪ್ರಾಗೆ ಜೆಡಿಎಸ್ ಗಾಳ ಹಾಕಲು ಮುಂದಾಗಿದೆ.
ಸವದತ್ತಿಯಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಕಾಂತಾದೇವಿ ಛೋಪ್ರಾ ಎಮೋಷನಲ್ ಟಚ್ ನೀಡಿದ್ದಾರೆ. 2013, 2018ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ಒಡ್ಡಿದ್ದ ಆನಂದ ಚೋಪ್ರಾ, ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆದರೆ, ಕಳೆದ ಚುನಾವಣೆಯಲ್ಲಿ ಆನಂದ ಮಾಮನಿಗೆ ತೀವ್ರ ಪೈಪೋಟಿ ನೀಡಿದ್ದ ಚೋಪ್ರಾ ಅವರು ಈಗ ವಿಧಿವಶರಾಗಿದ್ದಾರೆ. ಈಗ ಅವರ ಪುತ್ರ ಸೌರಭ್ ಚೋಪ್ರಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಸೌರಬ್‌ಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಸವದತ್ತಿಯಲ್ಲಿ ಬೆಂಬಲಿಗರ ಸಭೆಯನ್ನು ನಡೆಸಿದ ವೇಳೆ ತಾಯಿ ಕಾಂತಾದೇವಿ ಕಣ್ಣೀರು ಹಾಕಿದರು. ಗಂಡನನ್ನು ಕಳೆದುಕೊಂಡ ನಾನು ನಿಮಗೆ ಮಗನನ್ನು ಬಿಟ್ಟಿದ್ದೇನೆ. ನೀವೇನು ಮಾಡ್ತೀರಿ ಮಾಡಿ, ನಿಮಗೆ ಬಿಟ್ಟಿದ್ದು ಎಂದು ಮಂಡಿಯೂರಿ ಅಳಲು ತೋಡಿಕೊಂಡಿದ್ದಾರೆ.