Jul 28, 2023, 7:09 PM IST
ಬೆಂಗಳೂರು (ಜು.28): ರಾಜ್ಯದಲ್ಲಿ ಇನ್ನುಮುಂದೆ ಶಾಸಕರು ತಮ್ಮ ಸಮಸ್ಯೆಗಳಿದ್ದರೆ ಯಾವುದೇ ಲಿಖಿತ ಪತ್ರವನ್ನು ಬರೆಯದೇ ನೇರವಾಗಿ ಬಂದು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.
ಗುರುವಾರ ಸಂಜೆ ವೇಳೆ ನಡೆದ ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು, ಸಮಸ್ಯೆಗಳಿದ್ದರೆ ನೇರವಾಗಿ ನೀವು ಸಂಬಂಧಪಟ್ಟ ಸಚಿವರು ಹಾಗೂ ನೇರವಾಗಿ ಮುಖ್ಯಮಂತ್ರಿಗಳ ಬಂದು ಹೇಳಿಕೊಳ್ಳಿ. ಪತ್ರವನ್ನು ಬರೆದು ಅಹವಾಲು ಕಳಿಸಬೇಡಿ. ಏನೇ ವಿಚಾರಗಳಿದ್ದರೂ ನೇರವಾಗಿ ಬಂದು ಹೇಳಿಕೊಂಡಲ್ಲಿ ಸಮಸ್ಯೆ ಪರಿಹರಿಸಲಾಗುತ್ತದೆ. ಇನ್ನು ರಾಜ್ಯದಲ್ಲಿ ಪಕ್ಷ ಮುಖ್ಯವಾಗಿದ್ದು, ಎಲ್ಲರ ಅಹವಾಲುಗಳನ್ನು ನಾವು ಕೇಳುತ್ತೇವೆ. ಜೊತೆಗೆ, ಅಗತ್ಯವಿದ್ದಾಗ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತೆಯೂ ನೇರವಾಗಿ ಹೇಳಿ. ಅದಕ್ಕಾಗಿ ಪತ್ರವನ್ನು ಬರೆಯುವುದು ಬೇಡವೆಂದು ಸಭೆಯಲ್ಲಿ ಶಾಸಕರಿಗೆ ಸಲಹೆಯನ್ನು ನೀಡಿದ್ದಾರೆ.