
ತವರು ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್ ಅವರ 'ಸೈಲೆಂಟ್ ಆಟ' ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ. ಪಟ್ಟದ ಮಾತುಗಳು, ಶಕ್ತಿ ಪ್ರದರ್ಶನ ಹಾಗೂ ಬೆಂಬಲಿಗರ ಹೇಳಿಕೆಗಳು ಮುಂದಿನ ನಡೆ ಏನೆಂಬ ಕುತೂಹಲ ಮೂಡಿಸಿವೆ. ಸಿದ್ದರಾಮಯ್ಯ ಜೊತೆಗಿನ ಮೈತ್ರಿಯಲ್ಲೂ ಪೈಪೋಟಿ ಮುಂದುವರೆದಿದೆ.
ಬೆಂಗಳೂರು (ಜು.25): ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ಡಿ.ಕೆ. ಶಿವಕುಮಾರ್ ಅವರ 'ಸೈಲೆಂಟ್ ಆಟ' ಚರ್ಚೆಗೆ ಕಾರಣವಾಗಿದೆ. ಭೀಮನ ಅಮಾವಾಸ್ಯೆ ಸಂದರ್ಭ ಕನಕಾಧಿಪತಿ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿದ 'ಪಟ್ಟದ ಮಾತುಗಳು' ರಾಜ್ಯದ ರಾಜಕೀಯ ವಲಯದಲ್ಲಿ ಹೊಸ ವಾದ-ವಿವಾದಕ್ಕೆ ದಾರಿ ಮಾಡಿವೆ. ಸಧ್ಯದ ರಾಜಕೀಯ ಸಮೀಕರಣಗಳು, ಆಂತರಿಕ ಸಂಘರ್ಷದ ಹಿನ್ನಲೆಯಲ್ಲಿ ಡಿಕೆಶಿಯ ಈ ಚಲನೆಗೆ ವಿಶೇಷ ಮಹತ್ವ ವಹಿಸಲಾಗಿದೆ.
ಕಳೆದ ಎರಡು ವರ್ಷಗಳಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು, ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಮೈತ್ರಿಯ ನಡುವೆ ರಾಜಕೀಯ ಪೈಪೋಟಿಯ ತೀವ್ರತೆಯೂ ಉಳಿದಿದೆ. ಈ ನಡುವೆ ಡಿಕೆಶಿ ತಮ್ಮ ತವರು ತಲಕಾಡಿನಲ್ಲಿ ಶಕ್ತಿಪ್ರದರ್ಶನ ನಡೆಸಿ, ರಾಜಕೀಯವಾಗಿ ಮತ್ತಷ್ಟು ಒತ್ತಡ ಬಿರುಸನ್ನು ಉಂಟುಮಾಡಿದ್ದಾರೆ.
ಮೌನದ ಹಿಂದಿನ ಮಾಸ್ಟರ್ ಪ್ಲಾನ್?
ಡಿಕೆಶಿಯ ಮಾತುಗಳಲ್ಲಿ ರಾಜಕೀಯ ಸ್ಫೋಟವಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಅವರು ಬಹಿರಂಗವಾಗಿ ಅಧಿಕಾರದ ಹಂಬಲ ವ್ಯಕ್ತಪಡಿಸದಿದ್ದರೂ, “ಕಾದು ನೋಡಿ, ನನ್ನ ಟೈಮ್ ಬರಲಿದೆ” ಎಂಬ ನಿರೀಕ್ಷೆ ಬಿಟ್ಟಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ಎಲ್ಲಾ ನಡೆಗಳು ರಾಜ್ಯ ರಾಜಕಾರಣದಲ್ಲಿ ‘ಸಿಂಹಾಸನ ಸಮರ’ ಇನ್ನೂ ಮುಗಿದಿಲ್ಲ ಎಂಬ ಸಂದೇಶವನ್ನೇ ನೀಡುತ್ತಿವೆ.
ಹೈಕಮಾಂಡ್ ಸಂಕಷ್ಟದಲ್ಲಿ...
ಕೈಪಕ್ಷದ ಉಭಯ ನಾಯಕತ್ವದ ನಡುವೆ ನಡೆಯುತ್ತಿರುವ ಅಧಿಕಾರದ ಸೆಳೆತದ ನಡುವೆ ಹೈಕಮಾಂಡ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಎರಡೂ ನಾಯಕರಿಗೆ ಸಮಾಧಾನ ಮಾಡಬೇಕಾದ ಪರಿಸ್ಥಿತಿ, ಒಂದು ನಿರ್ಧಾರ ತೆಗೆದುಕೊಳ್ಳಲು ವಿಳಂಬ ಮಾಡುತ್ತಿದೆ. ಮುಖ್ಯಮಂತ್ರಿ ಹುದ್ದೆ ಇಂದೇ ಖಾಲಿಯಾಗುವ ತ್ವರಿತ ಲಕ್ಷಣಗಳಿಲ್ಲದಿದ್ದರೂ, ಡಿಕೆ ಪರ ಬಣದ ಕಾರ್ಯಕರ್ತರಲ್ಲಿ ನಿರಂತರ ಧೈರ್ಯ ತುಂಬುತ್ತಿರುವಂತೆ ಕಾಣಿಸುತ್ತಿದೆ.
ಬಂಟರ ಮೂಲಕ ಬಾಂಬ್ ಸಿಡಿಸುವ ಸ್ಟೈಲ್...
ಡಿಕೆಶಿ ಮೌನವಾಗಿದ್ದರೂ ಅವರ ಬಂಟರು ಮುಕ್ತವಾಗಿ ಧ್ವನಿ ಎತ್ತುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಹಿಡಿದು ಸಭಾ ವೇದಿಕೆಗಳವರೆಗೆ ಡಿಕೆ ಪರ ಅಭಿಮಾನಿಗಳು ಹೊಸ ಬಾಂಬ್‌ಗಳನ್ನು ಸಿಡಿಸುತ್ತಿದ್ದಾರೆ. ಇದರಿಂದಾಗಿ ಪಕ್ಷದ ಒಳಪಂಗಡ ರಾಜಕಾರಣ ಇನ್ನಷ್ಟು ಬಿಗಿಯಾಗುತ್ತಿದೆ.