
ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಪೈಪೋಟಿ ತೀವ್ರಗೊಂಡಿದೆ. ಅಧಿಕಾರ ಹಂಚಿಕೆ ಸೂತ್ರದಂತೆ ತಮಗೆ ಪಟ್ಟ ನೀಡಬೇಕೆಂದು ಡಿಕೆಶಿ ಪಟ್ಟು ಹಿಡಿದಿದ್ದು, ಈ ಸಂಘರ್ಷ ಶಮನಗೊಳಿಸಲು ಹೈಕಮಾಂಡ್ 3ನೇ ವ್ಯಕ್ತಿಯನ್ನು ಪರಿಗಣಿಸುವ ಸಾಧ್ಯತೆಯಿದೆ.
ಬೆಂಗಳೂರು/ದೆಹಲಿ (ನ.26): ಕರ್ನಾಟಕ ಕಾಂಗ್ರೆಸ್ ಸಾಮ್ರಾಜ್ಯದ ಸಿಂಹಾಸನ ಕದನ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಮುಖ್ಯಮಂತ್ರಿ ಹುದ್ದೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಪ್ರಚಂಡ ಪಟ್ಟದಾಟ ಈಗ ದೆಹಲಿಗೆ ಶಿಫ್ಟ್ ಆಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಭೇಟಿಯನ್ನು ಮುಗಿಸಿ ಇಂದ್ರಪ್ರಸ್ಥಕ್ಕೆ ಹಿಂದಿರುಗಿದ ಬೆನ್ನಲ್ಲೇ, ಕನಕಾಧಿಪತಿ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮೇಲೆ 'ಆತ್ಮಸಾಕ್ಷಿಯ ಅಸ್ತ್ರ' ಪ್ರಯೋಗ ಮಾಡಿದ್ದಾರೆ ಎನ್ನಲಾಗಿದೆ.
ಕೊಟ್ಟ ಮಾತು ಉಳಿಸಿಕೊಳ್ಳಿ: ಖರ್ಗೆಗೆ ಡಿಕೆಶಿ ಡಿಮ್ಯಾಂಡ್
ರಾಜಕೀಯ ಮೂಲಗಳ ಪ್ರಕಾರ, ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರೆಯುತ್ತಿರುವ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ತಮ್ಮ ದಂಡನಾಯಕರನ್ನು ಮುಂಚೂಣಿಗೆ ಬಿಟ್ಟಿದ್ದು, ಹೈಕಮಾಂಡ್ ಮುಖ್ಯಸ್ಥರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ 'ಕೊಟ್ಟ ಮಾತು ಉಳಿಸಿಕೊಳ್ಳಿ' ಎಂಬ ನೇರ ಸಂದೇಶ ರವಾನಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸೂತ್ರದ ಕುರಿತು ನಡೆದ ಗುಟ್ಟಿನ ಮಾತುಕತೆ ಮತ್ತು ಸಿದ್ದರಾಮಯ್ಯ ಸಂಪುಟ ರಚನೆ ವೇಳೆ '5-6 ಜನರ ವ್ಯಾಪಾರ ಗುಟ್ಟು' ಸೇರಿದಂತೆ ಈವರೆಗಿನ ಎಲ್ಲಾ ರಾಜಕೀಯ ಬೆಳವಣಿಗೆಗಳನ್ನು ಸ್ಮರಿಸಿರುವ ಡಿಕೆಶಿ, ಇದೀಗ ಸಿಎಂ ಪಟ್ಟ ಪ್ರಾಪ್ತಿಯಾಗಲು ತಾವು ನಂಬಿರುವ 'ಮಹಾಶಕ್ತಿ' ಮೇಲೆ ಭರವಸೆ ಇಟ್ಟಿದ್ದಾರೆ. ಇದು ದೆಹಲಿ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸಿಂಹಾಸನ ರಕ್ಷಣೆಗೆ ಸಿದ್ದು ಸೇನೆಯ ಸರ್ವ ಪ್ರಯತ್ನ
ಒಂದೆಡೆ ಡಿ.ಕೆ. ಶಿವಕುಮಾರ್ ಪಟ್ಟು ಸಡಿಲಿಸದಿದ್ದರೆ, ಇನ್ನೊಂದೆಡೆ ಸಿದ್ದರಾಮಯ್ಯ ಅವರ ಸೇನೆ ಸಿಂಹಾಸನ ರಕ್ಷಣೆಗೆ ಸರ್ವ ಪ್ರಯತ್ನ ನಡೆಸಿದೆ. ಪಟ್ಟ ಬಿಟ್ಟುಕೊಡಲು ಸಿದ್ದರಾಮಯ್ಯ ಸಿದ್ಧರಿಲ್ಲ. ಈ ಜಟಾಪಟಿ ಮತ್ತು 'ಆತ್ಮಸಾಕ್ಷಿಯ ಆಟ' ಪಕ್ಷದ ಹೈಕಮಾಂಡ್‌ಗೆ ಬೆಟ್ಟದಂತಹ ಸವಾಲನ್ನು ಒಡ್ಡಿದೆ.
ಪಟ್ಟದ ಆಟದ ರೇಸ್‌ಗೆ ಮತ್ತೊಂದು ಹೆಸರು?
ಸಿದ್ದರಾಮಯ್ಯ ಪಟ್ಟ ಬಿಡ್ತಿಲ್ಲ, ಡಿ.ಕೆ. ಶಿವಕುಮಾರ್ ಪಟ್ಟು ಸಡಿಲಿಸುತ್ತಿಲ್ಲ. ಈ ಇಬ್ಬರು 'ಮದಗಜಗಳ' ಮಧ್ಯೆ ನಡೆಯುತ್ತಿರುವ ಅಂತರ್ಯುದ್ಧ ತಣಿಸಲು ಕಾಂಗ್ರೆಸ್ ಹೈಕಮಾಂಡ್ ಬಳಿ ಇರುವ ಅಂತಿಮ ಆಯ್ಕೆಯಾಗಿ ಮತ್ತೊಂದು ಹೆಸರು ಕೇಳಿ ಬರುತ್ತಿದೆ. ಈ ಸಂಘರ್ಷವನ್ನು ಶಾಂತಗೊಳಿಸಲು ಪಕ್ಷವು ಹಠಕ್ಕೆ ಬಿದ್ದಿರುವ ಇಬ್ಬರು ಬಲಾಢ್ಯ ನಾಯಕರಿಗೂ ಪಟ್ಟ ಸಿಗದಂತೆ ತಟಸ್ಥ ಮತ್ತು ಅನುಭವಿ ಮೂರನೇ ವ್ಯಕ್ತಿಯತ್ತ ಒಲವು ತೋರುವ ಸಾಧ್ಯತೆಯಿದೆ ಎಂಬ ಹೊಸ ಟ್ವಿಸ್ಟ್ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸದ್ಯ ಕಾಂಗ್ರೆಸ್ ಹೈಕಮಾಂಡ್ ಮುಂದಿರುವ ಈ "ಬಿಗ್ ಚಾಲೆಂಜ್" ಅನ್ನು ಹೇಗೆ ನಿಭಾಯಿಸಿ, ಯಾರಿಗೆ ಪಟ್ಟ ಒಲಿಯಲಿದೆ, ಅಥವಾ ಮೂರನೇ ವ್ಯಕ್ತಿಯ ಸೂತ್ರ ಜಾರಿಗೆ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.