Jul 28, 2023, 8:24 PM IST
ಬೆಂಗಳೂರು (ಜು.28): ರಾಜ್ಯ ಕಾಂಗ್ರೆಸ್ ವಲಯದಲ್ಲಿ ಪ್ರಮುಖ ವಿದ್ಯಮಾನಗಳು ನಡೆಯುತ್ತಿರುವುದು ಹಾಗೂ ಮತ್ತೊಂದೆಡೆ ಸರ್ಕಾರ ಪತನಕ್ಕೆ ಬಿಜೆಪಿ-ಜೆಡಿಎಸ್ ಪಿತೂರಿ ನಡೆಸುತ್ತಿವೆ ಎಂಬ ಆರೋಪಗಳ ನಡುವೆಯೇ ಗುರುವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ತಮ್ಮ ಎರಡು ಅವಧಿಯ ಅಧಿಕಾರಾವಧಿಯಲ್ಲಿ ಯಾವತ್ತೂ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರೇ ಪತ್ರ ಬರೆದ ಘಟನೆ ನಡೆದಿಲ್ಲ. ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದಿತ್ತು. ಪತ್ರ ಬರೆಯುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿಯಾಗುವಂತಾಗಿದೆ ಎಂದು ಮುಖ್ಯಮಂತ್ರಿಯವರು ಅಸಮಾಧಾನ ವ್ಯಕ್ತಪಡಿಸಿ, ಇನ್ನು ಯಾವತ್ತೂ ಇಂತಹ ಪತ್ರ ಬರೆಯದಂತೆ ಶಾಸಕರಿಗೆ ತಾಕೀತು ಮಾಡಿದ ಘಟನೆಯೂ ನಡೆದಿದೆ.
ಇದಕ್ಕೆ ಪತ್ರ ಬರೆದ ಶಾಸಕರಾದ ಬಸವರಾಜ ರಾಯರೆಡ್ಡಿ ಹಾಗೂ ಬಿ.ಆರ್. ಪಾಟೀಲ್ ಅವರು, ಸಭೆಯ ಕ್ಷಮೆಯನ್ನು ಕೋರಿದ್ದು, ತಮ್ಮ ಅಳಲು ತೋಡಿಕೊಳ್ಳುವ ಸದುದ್ದೇಶದಿಂದಷ್ಟೇ ಪತ್ರ ಬರೆದಿದ್ದೆವು. ಆದರೆ, ಪಿತೂರಿಕಾರರು ನಕಲಿ ಪತ್ರವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ವಿಷಯ ದೊಡ್ಡದಾಗುವಂತೆ ಮಾಡಿದ್ದಾರೆ. ವಿಷಯ ಇಂತಹ ತಿರುವು ತೆಗೆದುಕೊಳ್ಳುತ್ತದೆ ಎಂಬ ಕಲ್ಪನೆಯಿರಲಿಲ್ಲ ಎಂದು ಸಮಜಾಯಿಷಿಯನ್ನು ನೀಡಿದರು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಶಿವಲಿಂಗೇಗೌಡ, ಬಿ.ಆರ್. ಪಾಟೀಲ್, ವೀರೇಂದ್ರ (ಪಪ್ಪಿ), ವಿನಯ ಕುಲಕರ್ಣಿ ಹಾಗೂ ಶರತ್ ಬಚ್ಚೇಗೌಡ ಮೊದಲಾದ ಶಾಸಕರು ವರ್ಗಾವಣೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲ ಇಲಾಖೆಯ ಸಚಿವರ ನಡವಳಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು.