Mar 28, 2023, 5:12 PM IST
ಬೆಂಗಳೂರು (ಮಾ.28): ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ದೊಡ್ಡ ಗೊಂದಲ ಸೃಷ್ಟಿ ಮಾಡಿದ್ದಾರೆ. ಈಗ ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯ ವೇದಿಕೆಗೆ ತರಬೇಕು ಅಂತ ಯಡಿಯೂರಪ್ಪ ಮನೆಗೆ ಅಮಿತ್ ಷಾ ಅವರನ್ನು ಕರೆದುಕೊಮಡು ಹೋಗಿ ಬೆನ್ನು ತಟ್ಟಿಸಿ ಬಂದಿದ್ದಾರೆ. ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ಹೊಡೆಯುವುದು, ಬಿಜೆಪಿಯವರ ಆಂತರಿಕ ಕುತಂತ್ರವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯ ವೇದಿಕೆಗೆ ಕರೆತರಲು ಅಮಿತ್ ಶಾ ಅವರನ್ನು ಅವರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಮೀಸಲಾತಿ ಹಂಚಿಕೆ ವಿಚಾರದಲ್ಲಿ ಯಡಿಯೂರಪ್ಪನವರು ಸರ್ಕಾರದ ಪ್ರತಿನಿಧಿಯಾಗಿ ಭಾಗಿಯಾಗಿರಲಿಲ್ಲ. ಆದರೂ, ಅವರ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ ಎಂದರೆ ಇದು ಬಿಜೆಪಿಯ ಆಂತರಿಕ ಕುತಂತ್ರವಾಗಿದೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಬೇಕು ಅಂತ ಕಲ್ಲು ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ನಾಯಕರು ಕಡಿವಾಣ ಹಾಕ್ತಾರೆ:
ಮುಖ್ಯಮಂತ್ರಿಗಳ ಮೇಲೆ ಕಲ್ಲು ಹೊಡೆದಿದ್ರೆ ಓಕೆ ಫೈನ್. ಮೀಸಲಾತಿ ಆಕ್ರೋಶ ವ್ಯಕ್ತಪಡಿಸುವುದು ಸಹಜ. ಆದರೆ ಯಡಿಯೂರಪ್ಪ ಅವರ ಮನೆ ಮೇಲೆ ಮಾಡ್ತಾರೆ ಅಂದರೆ ಇದು ಬಿಜೆಪಿಯ ಆಂತರಿಕ ಸಮಸ್ಯೆ ಆಗಿದೆ. ಬಿಜೆಪಿಯಲ್ಲಿ ಯಾರಿಗೂ ಒಬ್ಬರಿಗೊಬ್ಬರು ಸಮಾಧಾನ ಇಲ್ಲ. ನ್ಯಾಷನಲ್ ಲೀಡರ್ಸ್ ಗಳು ಎಲ್ಲರಿಗೂ ಕಡಿವಾಣ ಹಾಕಿ ಹೆದರಿಸಿ ಬೆದರಿಸಿದ್ದಾರೆ. ರೈಟ್, ಲೆಫ್ಟ್ ಗೆ ಹೋಗ್ಬೇಡಿ ಅಂತ ಫೋನ್ ಎಲ್ಲಾ ಕಿತ್ಕೊಂಡು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬದ್ಧತೆಯಿಂದ ಮೀಸಲಾತಿ ಕೊಡಬೇಕು:
ಯಡಿಯೂರಪ್ಪ ಮಾತನಾಡೋದು ಅವರಿಗೆ ಬಿಟ್ಟ ವಿಚಾರವಾಗಿದೆ. ನಾನು ಒಂದು ಪಕ್ಷದ ರಾಜ್ಯ ಅಧ್ಯಕ್ಷನಾಗಿ ಹೇಳುತ್ತಿದ್ದೇನೆ. ಇದು ರಾಜ್ಯ ಅಲ್ಲ ರಾಷ್ಟ್ರದಲ್ಲೇ ಒಂದು ಗೊಂದಲ ಸೃಷ್ಟಿ ಮಾಡಿದ್ದಾರೆ. ಸುಪ್ರೀಂಕೋರ್ಟ್ ವಿರುದ್ಧವಾಗಿ ಇಬ್ಬರು ಮಂತ್ರಿಗಳು ಕೂತು ಮೀಸಲಾತಿ ಮಾಡಿದ್ದಾರೆ. ಯಾವುದೇ ವರದಿ ಇಲ್ಲ ಹಿಂದುಳಿದ ವರ್ಗಗಳ ಆಯೋಗದ ವರದಿ ಇಲ್ಲ. ಡಿಸೆಂಬರ್‌ನಲ್ಲಿ ಕೊಟ್ಟ ಮಧ್ಯಂತರ ವರದಿಯಲ್ಲಿ ತೀರ್ಮಾನ ಆಗಿಲ್ಲ. ಮೀಸಲಾತಿಯನ್ನ ಸರಿಯಾದ ಬದ್ಧತೆಯಿಂದ ಮಾಡಬೇಕು ಎಂದು ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.