Mar 18, 2022, 1:47 PM IST
ಅನೇಕ ದಿನಗಳಿಂದ ಸದ್ದು ಮಾಡುತ್ತಿರುವ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆಯೂ ಹೊಸ ಮುಖಗಳು, ಭವಿಷ್ಯದ ನಾಯಕರಾಗಬಲ್ಲವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಹೈಕಮಾಂಡ್ ದೂರದೃಷ್ಟಿಯ ಸೂತ್ರ ಅಳವಡಿಸಿಕೊಳ್ಳುತ್ತದೆಯೇ ಎಂಬ ಕುತೂಹಲ ಗರಿಗೆದರಿದೆ.
ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ಪಕ್ಷ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಕೆಲ ಹಿರಿಯರನ್ನು ಕೈಬಿಡುವ ಸಾಧ್ಯತೆ ಬಗ್ಗೆ ಈಗಾಗಲೇ ಗುಸುಗುಸು ದಟ್ಟವಾಗಿದೆ. ಯುವ ನಾಯಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ.
ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಮರಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಇದೀಗ ಸಚಿವರ ಆಯ್ಕೆಗೆ ಭವಿಷ್ಯದ ಮಾಸ್ಟರ್ ಪ್ಲಾನ್ ಹೆಣೆದಿದೆ. 2024ರಲ್ಲೂ ಕೇಂದ್ರದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತಾಗಬೇಕು ಎಂಬ ಉದ್ದೇಶದಿಂದ ಯುವ ನಾಯಕರಿಗೆ ಆದ್ಯತೆ ನೀಡುವುದೂ ಸೇರಿದಂತೆ 4 ರಾಜ್ಯಗಳ ಸಚಿವ ಸಂಪುಟ ರಚನೆಯನ್ನು ಬಹಳ ಲೆಕ್ಕಾಚಾರದಿಂದ ಮಾಡಲು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ.