Mar 13, 2023, 8:16 PM IST
ಬೆಂಗಳೂರು (ಮಾ.13): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ ಅವರ ಅಂತ್ಯಕ್ರಿಯೆಗೂ ಮೊದಲೇ ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ನಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ಘೋಷಣೆ ಮಾಡಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಆದರೆ, ಈ ಒತ್ತಡದಿಂದ ಕಾಂಗ್ರೆಸ್ ನಾಯಕರಿಗೆ ಪೀಕಲಾಟ ಶುರುವಾಗಿದೆ. ಈಗಾಗಲೇ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಧೃವನಾರಾಯಣ ಹಾಗೂ ಎಚ್.ಸಿ. ಮಹದೇವಪ್ಪ ಅವರು ಪ್ರಭಲ ಆಕಾಂಕ್ಷಿ ಆಗಿದ್ದರು. ಎಚ್.ಸಿ ಮಹದೇವಪ್ಪ ಹಾಗೂ ಧೃವನಾರಾಯಣ ನಡುವೆ ನಡೆದಿದ್ದ ಪೈಪೋಟಿ ನಡೆದಿತ್ತು. ಮಹದೇವಪ್ಪಗೆ ಟಿಕೆಟ್ ನೀಡಬಾರದು ಎಂದು ಧೃವನಾರಾಯಣ ಹೇಳುತ್ತಿದ್ದರು. ಆದರೆ ಮಣ್ಣು ಮಾಡುವ ಮೊದಲೇ ಧೃವನಾರಾಯಣ ಮಗನಿಗೆ ಟಿಕೆಟ್ ಘೋಷಣೆ ಮಾಡುವಂತೆ ಕೈ ನಾಯಕರ ಎದುರು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.