Jan 9, 2025, 1:27 PM IST
ತಿರುಪತಿ ತಿಮ್ಮಪ್ಪನ ಸನ್ನಿಧಿನಿಯಲ್ಲಿ ನಿನ್ನೆ ನಡೆದ ಘನಘೋರ ದುರಂತ ಕಾಲ್ತುಳಿತದಲ್ಲಿ ಐವರು ಭಕ್ತರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಜ.10ರಿಂದ ಜ.19ರವರೆಗೆ ತಿರುಪತಿ ತಿಮ್ಮಪ್ಪ ದೇಗುಲದಲ್ಲಿ ನಡೆಯುವ ವೈಕುಂಠ ಏಕಾದಶಿ ದರ್ಶನದ ಟಿಕೆಟ್ ವಿತರಣೆಯನ್ನು ಆರಂಭಿಸಿತ್ತು. ಇದಕ್ಕಾಗಿ ಟಿಕೆಟ್ ನೀಡುವುದಕ್ಕೆ ವಿಷ್ಣು ನಿವಾಸಂ ಕಟ್ಟಡದ ಬಳಿ ವಿಶೇಷ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಟಿಕೆಟ್ ಪಡೆಯುವುದಕ್ಕೆ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು. ಟಿಟಿಡಿ ವತಿಯಿಂದ 1.20 ಲಕ್ಷ ಟೋಕನ್‌ಗಳನ್ನು ನೀಡಲು ಮುಂದಾಗಿತ್ತು. ಬೆಳಗ್ಗೆ ಟಿಕೆಟ್ ನೀಡಲು ಟಿಟಿಡಿಯಿಂದ ಕೌಂಟರ್ ತೆರೆದಿದ್ದರಿಂದ ಬೆಳಗ್ಗೆವರೆಗೂ ತಿಮ್ಮಪ್ಪನ ಭಕ್ತರು ಅಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ರಾತ್ರಿ ವೇಳೆ ತುರ್ತು ಕಾರ್ಯದ ನಿಮಿತ್ತ ಕೌಂಟರ್‌ನ ಬಳಿ ಇದ್ದ ಗೇಟ್ ಒಂದನ್ನು ಟಿಟಿಡಿ ಸಿಬ್ಬಂದಿ ತೆರೆದಿದ್ದಾರೆ. ಆದರೆ, ಟಿಕೆಟ್ ಕೊಡುವುದಕ್ಕೆಂದೇ ಗೇಟ್ ತೆರೆಯಲಾಗಿದೆ ಎಂದು ಸರತಿ ಸಾಲಿನಲ್ಲಿ ನಿಂತಿದ್ದ ಸಾವಿರಾರು ಏಕಾಏಕಿ ದಿಢೀರನೇ ಚಿಕ್ಕ ಗೇಟಿನತ್ತ ನುಗ್ಗಿದ್ದಾರೆ. ಆದರೆ, ಮುಂದಿದ್ದ ಭಕ್ತರು ಗೇಟಿನ ಬಳಿ ಹೋಗಿ ನಿಲ್ಲುತ್ತಿದ್ದಂತೆ ಹಿಂದಿನ ಭಕ್ತರ ಒತ್ತಡ ತಾಳಲಾರದೇ ಕೆಳಗೆ ಬಿದ್ದಿದ್ದಾರೆ. ಆಗ, ಕಾಲ್ತುಳಿತ ಸಂಭವಿಸಿ ಐವರು ಭಕ್ತರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಉಳಿದಂತೆ ಐವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಜೊತೆಗೆ, 40 ಜನರು ಕಾಲ್ತುಳಿತದಿಂದ ಗಾಯಗೊಂಡಿದ್ದು, ಅವರಿಗೂ ಟಿಟಿಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.
ಇದನ್ನೂ ಓದಿ: Tirupati Temple Stamped: ತಿರುಪತಿಯಲ್ಲಿ ಕಾಲ್ತುಳಿಕ್ಕೆ ಕಾರಣ ಬಯಲು! ಪೊಲೀಸರ ಆ ಎಡವಟ್ಟಿನಿಂದಲೇ ದುರಂತ!
ಇಲ್ಲಿ ಮುಖ್ಯವಾಗಿ ಕಾಲ್ತುಳಿತಕ್ಕೆ ಕಾರಣವಾಗಿದ್ದು, ಟಿಟಿಡಿ ಆಡಳಿತ ಸಿಬ್ಬಂದಿ ಮತ್ತು ಪೊಲೀಸರ ನಡುವಿನ ಹೊಂದಾಣಿಕೆ ಕೊರತೆ ಎಂಬುದು ಇಲ್ಲಿ ಎಲ್ಲರಿಗೂ ಗೋಚರವಾಗುತ್ತಿದೆ. ಬೆಳಗ್ಗೆ ವೈಕುಂಠ ಏಕಾದರಿ ದರ್ಶನದ ಟಿಕೆಟ್ ನೀಡುವುದಾಗಿ ಕೌಂಟರ್ ಬಳಿ ಗೇಟು ಅಳವಡಿಸಿದ್ದರೂ, ತುರ್ತು ಕಾರ್ಯಕ್ಕೆ ಟಿಟಿಡಿ ಸಿಬ್ಬಂದಿ ಗೇಟು ತೆರೆಯುವ ಮುನ್ನ ಭಕ್ತಾದಿಗಳಿಗಾಗಲೀ ಅಥವಾ ಪೋಲೀಸರಿಗಾಗಲೀ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಅವರಿಬ್ಬರ ನಡುವೆ ಹೊಂದಾಣಿಕೆ ಕೊರತೆ ಇದ್ದುದರಿಂದ ಪೊಲೀಸರಿಗೆ ಹೇಳದೆ ಗೇಟ್ ತೆರೆಯಲಾಗಿದ್ದು, ಭಕ್ತಾದಿಗಳು ಒಮ್ಮೆಲೆ ಗೇಟಿನತ್ತ ಧಾವಿಸಿದ್ದಾರೆ. ಇದರಿಂದ ಕಾಲ್ತುಳಿತ ಸಂಭವಿಸಿ ಈ ದುರಂತ ನಡೆದು ಹೋಗಿದೆ ಎಂದು ಆರೋಪ ಮಾಡಲಾಗುತ್ತಿದೆ.