ಕರಾವಳಿಯಲ್ಲಿ ಮತ್ತೊಮ್ಮೆ ಕನ್ನಡ VS ತುಳು ಫೈಟ್..! ಕನ್ನಡ ಸ್ಟಿಕರ್ ಅಭಿಯಾನಕ್ಕೆ ತುಳು ಭಾಷಾ ಪ್ರೇಮಿಗಳು ಗರಂ

Dec 8, 2023, 10:43 AM IST

ಕಡಲ ನಗರಿ ಮಂಗಳೂರಿನಲ್ಲಿ ತುಳು ಭಾಷಿಕರೇ(Tulu Language) ಹೆಚ್ಚಿದ್ದಾರೆ. ಹೀಗಿದ್ದರೂ ಕನ್ನಡ ನೆಲದಲ್ಲಿ ಕನ್ನಡ ಉಳಿಸಿ ಅನ್ನೋ ಹೋರಾಟಗಳು ಹಿಂದಿನಿಂದಲೂ ನಡೆಯುತ್ತಲೇ ಇದೆ. ಜಿಲ್ಲೆಯ ಸಾರ್ವಜನಿಕ ಪ್ರದೇಶಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಆಗ್ರಹವನ್ನು ಕನ್ನಡ ಪರ ಹೋರಾಟಗಾರರು ಮಾಡುತ್ತಲೇ ಬಂದಿದ್ದಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಮಂಗಳೂರಿನ(Mangalore) ಜೀವನಾಡಿ ಎಂದು ಪರಿಗಣಿಸಲ್ಪಡುವ ಖಾಸಗಿ ಬಸ್‌ಗಳ(private buses) ರೂಟ್ ಬೋರ್ಡ್‌ನಲ್ಲಿ ಕನ್ನಡ ಹೊರತಾಗಿ ಇಂಗ್ಲಿಷ್(English) ಹಾಗೂ ಇತರೆ ಭಾಷೆಗಳ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಡಿಸೆಂಬರ್ 5 ರಂದು ಸಾರಿಗೆ ಇಲಾಖೆ ಹಾಗೂ ಕನ್ನಡ ಪರ ಹೋರಾಟಗಾರರು ಜಂಟಿಯಾಗಿ ಬಸ್ಗಳಿಗೆ ಕನ್ನಡ ರೂಟ್ ಸ್ಟಿಕರ್ ಅಂಟಿಸುವ ಅಭಿಯಾನ ಆರಂಭಿಸಿದ್ದಾರೆ. ಡಿಸೆಂಬರ್ 10 ರಿಂದ ಪೂರ್ಣ ಪ್ರಮಾಣದಲ್ಲಿ ಈ ಅಭಿಯಾನ ಆರಂಭಿಸಲು ಕನ್ನಡಪರ ಸಂಘಟನೆಗಳು ಸಿದ್ಧತೆ ನಡೆಸುತ್ತಿವೆ. ಇದರ ನಡುವೆ ಕನ್ನಡ ಸ್ಟಿಕರ್ ಅಭಿಯಾನಕ್ಕೆ(Kannada Sticker Campaign) ಆಕ್ರೋಶ ವ್ಯಕ್ತವಾಗಿದೆ. ಬಸ್ಗಳಿಗೆ ಸ್ಟಿಕರ್ ಅಂಟಿಸಿ ಸ್ಥಳದಲ್ಲಿಯೇ ಬಸ್ ಸಿಬ್ಬಂದಿಯಿಂದ ಸ್ಟಿಕರ್ನ ಬಾಬ್ತು ಹಣವನ್ನು ವಸೂಲಿ ಮಾಡಲಾಗಿದೆ.ಇದು ಖಾಸಗಿ ಬಸ್ ಮಾಲೀಕರು ಹಾಗೂ ತುಳು ಭಾಷಾ ಪ್ರೇಮಿಗಳನ್ನು ಸಿಟ್ಟಿಗೆಬ್ಬಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾದೇಶಿಕ ಭಾಷೆಯಾಗಿ ತುಳು ಗುರುತಿಸಿಕೊಂಡಿದೆ. ಅಲ್ಲದೇ ದೇಶದ ವಿವಿಧ ರಾಜ್ಯಗಳಿಗೆ ಸೇರಿದ ಜನ ಮಂಗಳೂರಲ್ಲಿ ಉದ್ಯೋಗ ಮಾಡ್ತಿದ್ದಾರೆ. ಹೀಗಾಗಿ ತುಳು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬೋರ್ಡ್ ಇರೋದ್ರಲ್ಲಿ ತಪ್ಪೇನು ಎಂದು ಕನ್ನಡ ಸ್ಟಿಕರ್ ಅಭಿಯಾನದ ವಿರುದ್ಧ ಸಿಡಿದೆದ್ದಿದ್ದಾರೆ.

ತುಳು ಭಾಷಿಕರೇ ಹೆಚ್ಚಿರುವ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕಾಗಿ ಹೋರಾಟಗಳು ನಡೆಯುತ್ತಲೇ ಇವೆ. ಹೀಗಿರುವಾಗ ಈಗ ಕನ್ನಡ ಸ್ಟಿಕರ್ ಅಭಿಯಾನ ಹಾಗೂ ಅದಕ್ಕೆ ಬಾಬ್ತು ವಸೂಲಿಗೆ ಇಳಿದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಒತ್ತಾಯಪೂರ್ವಕ ಕನ್ನಡ ಹೇರಿಕೆಯನ್ನ ನಾವು ಒಪ್ಪಲ್ಲ ಅನ್ನೋದು ಖಾಸಗಿ ಬಸ್ ಮಾಲೀಕರು ಹಾಗು ತುಳು ಭಾಷಿಕರ ವಾದ.  ಈ ಬೆಳವಣಿಗೆ ಮತ್ತೊಮ್ಮೆ ಕರಾವಳಿಯಲ್ಲಿ ಕನ್ನಡ ವರ್ಸಸ್ ತುಳು ಫೈಟ್ ಹುಟ್ಟುಹಾಕಿದೆ. ಇದರ ನಡುವೆಯೂ ಸಾರಿಗೆ ಇಲಾಖೆ ಕನ್ನಡ ಸ್ಟಿಕರ್ ಅಭಿಯಾನ ಮುಂದುವರೆಸುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ.

ಇದನ್ನೂ ವೀಕ್ಷಿಸಿ:  ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಮುಂದಾದ ಸರ್ಕಾರ: ಸ್ಮಾರಕ ಮಿತ್ರ ಯೋಜನೆಗೆ ಕೆಲವರ ವಿರೋಧ