ಮರಳು ಮಾಫಿಯಾಗೆ ಬ್ರೇಕ್ ಹಾಕಿದ್ರೂ ಡೋಂಟ್‌ಕೇರ್‌: ಕರಾವಳಿಯಲ್ಲಿ ಸೀಜ್ ಮಾಡಿರೋ ಮರಳಿನಲ್ಲೂ ಅಕ್ರಮ

Oct 21, 2023, 11:03 AM IST

ಕರಾವಳಿ ಭಾಗದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಮರಳು ಮಾಫಿಯಾಗೆ(Sand Mafia) ಬ್ರೇಕ್ ಹಾಕಲಾಗಿದೆ.ಸಿಆರ್‌ಜೆಡ್ ವಲಯದಲ್ಲಿ ಮರಳನ್ನು ತೆಗೆದು ಮಾರಾಟ ಮಾಡುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿತ್ತು. ಆದ್ರೆ ಕಾರವಾರದಲ್ಲಿ(Karwar) ಮಾತ್ರ ಮರಳು ದಂಧೆಕೋರರು ಈ ಆದೇಶಕ್ಕೆ ಡೋಂಟ್ಕೇರ್ ಎನ್ನುತ್ತಿದ್ದಾರೆ. ಅನಧಿಕೃತವಾಗಿ ಮರಳು ತೆಗೆದು ಮಾರಾಟ ಮಾಡ್ತಿದ್ದಾರೆ ಎನ್ನೋ ಆರೋಪ ಕೇಳಿಬಂದಿದೆ. ಕಾರವಾರ ತಾಲೂಕಿನ ಕಾಳಿ ನದಿಯಲ್ಲಿ  ಅಕ್ರಮವಾಗಿ ಮರಳು(illegal sand trafficking) ತೆಗೆದು ಮಾರಾಟ ಮಾಡ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆ ಎಸಿ ಜಯಲಕ್ಷ್ಮೀ, ಜೀವದ ಹಂಗನ್ನೇ ತೊರೆದು ರಾತ್ರೋ ರಾತ್ರಿ ಮರಳಿನ ಅಡ್ಡೆಗಳ ಮೇಲೆ ದಾಳಿ ನಡೆಸಿ ಮರಳು ಸೀಜ್ ಮಾಡಿದ್ರು. ಸೀಜ್ ಮಾಡಿದ ಮರಳನ್ನ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ಮುಂದಿನ ಕ್ರಮಕ್ಕೆ ಸೂಚನೆ ನೀಡಿದ್ರು. ಆದ್ರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾವುದೇ ಪ್ರಕಟಣೆ ಹಾಗೂ ಮಾಹಿತಿ ನೀಡದೆ ಗುತ್ತಿಗೆದಾರರಿಗೆ ಮಾರಾಟ ಮಾಡಿದ್ದಾರೆ ಅನ್ನೊ ಆರೋಪ ಕೇಳಿಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ಮಾರಾಟದ ಬಗ್ಗೆ ಮಾಹಿತಿ ನೀಡಲು ಎಸಿ ಜಯಲಕ್ಷ್ಮೀ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಆದ್ರೆ, ಗಣಿ ಇಲಾಖೆಯ ಹಿರಿಯ ಜಿಯೋಲಜಿಸ್ಟ್ ಆಶಾ ಮತ್ತು ಅಧಿಕಾರಿಗಳು ಮಾಹಿತಿ ನೀಡಿಲ್ಲ. ಇದ್ರಿಂದ ಅಧಿಕಾರಿಗಳ ನಡುವೆ ಕೋಲ್ಡ್ ವಾರ್ ಶುರುವಾಗಿದೆ. ಇನ್ನು ಸೀಜ್ ಮಾಡಿದ್ದ ಮರಳನ್ನು ಗುತ್ತಿಗೆದಾರರಿಗೆ ಮಾರಾಟ ಮಾಡಿರುವುದು ಬೆಳಕಿಗೆ ಬರ್ತಿದ್ದಂತೆ, ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಗುತ್ತಿಗೆದಾರನಾಗಿರುವ ಯುವ ಕಾಂಗ್ರೆಸ್ ಮುಖಂಡನಿಗೆ 5 ಲಕ್ಷ ರೂಪಾಯಿ ಬೆಲೆ ಬಾಳುವ ಮರಳನ್ನು ಕೇವಲ 35 ಸಾವಿರ ರೂಪಾಯಿಗೆ ಮಾರಾಟ ಮಾಡಿ ಗೋಲ್ಮಾಲ್ ಮಾಡಲಾಗಿದೆ ಎಂದು ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ  ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ತನಿಖೆಗೆ ಆಗ್ರಹಿಸಿ ವಿಧಾನ ಪರಿಷತ್ ಸಭಾಪತಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಸಚಿವರಿಗೆ ಪತ್ರ ಬರೆದು ದೂರು ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  ಮಂಗಳೂರಿನಲ್ಲಿ ಭುಗಿಲೆದ್ದ ಮತ್ತೊಂದು ವಿವಾದ: ದಸರಾ ದಾಂಡಿಯಾ ನೈಟ್ಸ್‌ಗೆ ಹಿಂದೂ ಸಂಘಟನೆಗಳ ಕಿಡಿ