Mar 4, 2022, 1:35 PM IST
ಲಕ್ನೋ (ಮಾ. 04): ಉತ್ತರ ಪ್ರದೇಶದಲ್ಲಿ (Uttar Pradesh) 7ನೇ ಹಂತದಲ್ಲಿ 54 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರವಾದ ವಾರಾಣಾಸಿ (varanasi)ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಅಷ್ಟೇ ಅಲ್ಲ ಲೋಕಸಭೆಯಲ್ಲಿ ವಾರಾಣಸಿಯನ್ನು ಪ್ರಧಾನಿ ಮೋದಿ ಪ್ರತಿನಿಧಿಸುತ್ತಿರುವುದು ಬಿಜೆಪಿಯ ನಿರೀಕ್ಷೆಗಳನ್ನು ಹೆಚ್ಚಿಸಿದೆ.
ಹಾಗಾಗಿ ಪ್ರಧಾನಿ ಮೋದಿಯವರೇ ಖುದ್ದು ವಾರಾಣಾಸಿಯಲ್ಲಿ ಬೀಡು ಬಿಟ್ಟು ಮುಂದಿನೆರಡು ದಿನ ಪ್ರಚಾರ ಕೈಗೊಳ್ಳಲಿದ್ದಾರೆ. ಮಾರ್ಚ್ 4 ಮತ್ತು 5ರಂದು ಮೋದಿ ವಾರಾಣಸಿಗೆ ಬಂದು ಭರ್ಜರಿ ಮಯತಾಚನೆ ನಡೆಸಲಿದ್ದಾರೆ. ಮೊದಲ ದಿನ, ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ಮೋದಿ ರೋಡ್ ಶೋ ಆರಂಭಿಸಲಿದ್ದಾರೆ. ಬಳಿಕ ಕಾಶಿ ವಿಶ್ವನಾಥ್ ದೇಗುಲಕ್ಕೂ ಭೇಟಿ ನೀಡಿ ವಿಶೇಷ ಪೂಜೆ ನಡೆಸಲಿದ್ದಾರೆ. ಎರಡನೇ ದಿನ ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈಗಾಗಲೇ ಅಮಿತ್ ಶಾ ಇಲ್ಲಿ ಪ್ರಚಾರ ನಡೆಸಿದ್ದಾರೆ. ಮುಂದಿನ ಎರಡು ದಿನ ಇತರ ಪಕ್ಷದ ನಾಯಕರು ಕೂಡಾ ವಾರಾಣಸಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಕೂಡಾ ಇಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಯ ನಾಯಕರೂ ಪ್ರಚಾರ ಕಣದಲ್ಲಿದ್ದಾರೆ.
ವಾರಾಣಸಿಯಲ್ಲಿಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಕಳೆದ 2017ರ ಚುನಾವಣೆಯಲ್ಲಿ ಎಲ್ಲಾ 8 ಸೀಟುಗಳನ್ನು ಬಿಜೆಪಿ ಹಾಗೂ ಮಿತ್ರಪಕ್ಷಗಳು ಬಾಚಿಕೊಂಡಿದ್ದುವು. ವಾರಾಣಾಸಿ ದಕ್ಷಿಣ ಕ್ಷೇತ್ರ ಕೇಸರಿ ಪಡೆಯ ಭದ್ರಕೋಟೆಯಾಗಿದ್ದು, ಕಳೆದೆರಡೂವರೆ ದಶಕಗಳಿಂದ ಸತತವಾಗಿ ಬಿಜೆಪಿಯ ಅಭ್ಯರ್ಥಿಯೇ ಜಯಗಳಿಸುತ್ತಿದ್ದಾರೆ.