UP Elections 2022: ಹಿಂದುಳಿದ ವರ್ಗವನ್ನು ಸೆಳೆಯಲು ಅಖಿಲೇಶ್ ತಂತ್ರ, ಯೋಗಿಗೆ ಸವಾಲು.?

Jan 19, 2022, 10:05 AM IST

ಲಕ್ನೋ (ಜ. 19):  2014 ರಲ್ಲಿ ನರೇಂದ್ರ ಮೋದಿ (Narendra Modi) ಕಾರಣದಿಂದ ಬಿಜೆಪಿ ಉಚ್ಚಾಯ ಶುರು ಆದ ಮೇಲೆ ಗಮನಿಸಬೇಕಾದ ಒಂದು ಅಂಶ ಎಂದರೆ ಕರ್ನಾಟಕ, ಯುಪಿ ಸೇರಿದಂತೆ ಪೂರ್ತಿ ದೇಶದಲ್ಲಿ ಅತೀ ಹಿಂದುಳಿದ ಸಮುದಾಯಗಳು ಹಿಂದುತ್ವದ ಅಡಿಯಲ್ಲಿ ಬಿಜೆಪಿ ಜೊತೆ ಬಂದಿದ್ದು. ಯುಪಿಯಲ್ಲಿ ಕೂಡ ಆಗಿದ್ದು ಅದೇ.

90ರ ದಶಕದಲ್ಲಿ ಒಂದು ಕಡೆ ಅಯೋಧ್ಯೆಯ ಮಂದಿರ (Ayodhya Mandir) ಆಂದೋಲನದಿಂದ ಯುಪಿಯಲ್ಲಿ ಮಜಬೂತ ಆದರೆ, ಮಂಡಲ್ ವರದಿ ಹೋರಾಟದ ಫಲಾನುಭವಿ ಎಂದರೆ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಆದರೆ ಮುಲಾಯಂ ಆಡಳಿತದಲ್ಲಿ ಪ್ರಾತಿನಿಧ್ಯ ಮತ್ತು ಅಧಿಕಾರ ಎರಡು ಕೂಡ ಯಾದವರಿಗೆ ದಂಡಿಯಾಗಿ ಸಿಕ್ಕಿದ್ದರಿಂದ ಮುನಿಸಿಕೊಂಡಿದ್ದ ಯಾದವೇತರ ಹಿಂದುಳಿದ ವರ್ಗಗಳು ಮೋದಿ ಕೂಡ ಹಿಂದುಳಿದ ಸಮುದಾಯ ದವರು ಎಂಬ ಕಾರಣಕ್ಕೆ ಬಿಜೆಪಿ ಕಡೆ ವಾಲಿದ್ದವು.

ಒಂದು ಅಂದಾಜಿನ ಪ್ರಕಾರ   ಯುಪಿಯಲ್ಲಿ ಲೋಧ್, ನಿಶಾದ, ಕುರ್ಮಿ, ಸೈನಿ, ಚೌಹಾಣ್, ರಾಜಭರ್, ಮೌರ್ಯ, ಕುಶ್ವಾಹ್, ಹೀಗೆ ನೂರಾರು ಸಣ್ಣ ಜಾತಿಗಳು ಸೇರಿ ಸುಮಾರು 35 ಪ್ರತಿಶತದಷ್ಟು ಇದ್ದಾರೆ. 5 ವರ್ಷ ಬಿಜೆಪಿ ಜೊತೆಗಿದ್ದ ಈ ಸಣ್ಣ ಸಮುದಾಯಗಳ ನಾಯಕರು ಹೊಯ್ದಾಡುತ್ತಿರುವುದು ಯುಪಿ ಚುನಾವಣೆಯನ್ನು ಇನ್ನಷ್ಟು ಕುತೂಹಲಕ್ಕೆ ದೂಡಿದೆ.

UP Elections: ಯೋಗಿ, ಅಖಿಲೇಶ್ ಯಾರಿಗೆ ಯುಪಿ ಉಪ್ಪರಿಗೆ?

ಒಂದು ಅಂದಾಜಿನ ಪ್ರಕಾರ ಯುಪಿಯಲ್ಲಿ ಬ್ರಾಹ್ಮಣರು ಸೇರಿದಂತೆ 20 ಪ್ರತಿಶತ ಮೇಲ್ಜಾತಿಗಳಿದ್ದು ಅವರು ಹೆಚ್ಚಾಗಿ ಬಿಜೆಪಿ ಜೊತೆಗಿದ್ದಾರೆ. ಹೆಚ್ಚು ಕಡಿಮೆ ಜೊತೆಗೂಡಿದರೆ  25 ಪ್ರತಿಶತ ಇರುವ ಯಾದವ ಮತ್ತು ಮುಸ್ಲಿಮರು ಕಟ್ಟಾ ಅಖಿಲೇಶ್ ಯಾದವ್ ಮತದಾರರು. ಸುಮಾರು 14 ಪ್ರತಿಶತ ಇರುವ ದಲಿತ, ಜಾಟವರು ಪಕ್ಕಾ ಮಾಯಾವತಿ ಮತದಾರರು. ಆದರೆ  ಕಾಂಗ್ರೆಸ್‌ಗೆ ಮಾತ್ರ  ಪಕ್ಕಾ ವೋಟ್ ಬ್ಯಾಂಕ್ ಕಾಣುತ್ತಿಲ್ಲ. ಒಂದು ಕಾಲದಲ್ಲಿ ಕಾಂಗ್ರೆಸ್ ಜೊತೆಗಿದ್ದ  ಮುಸ್ಲಿಮರು ಅಖಿಲೇಶ್ ಕಡೆ, ಬ್ರಾಹ್ಮಣರು ಬಿಜೆಪಿ ಕಡೆ ವಾಲಿದ್ದಾರೆ

ಹೀಗಾಗಿ ಯುಪಿ ರಾಜಕೀಯ ಭವಿಷ್ಯವನ್ನು ನಿರ್ಧರಿಸುವವರು ಉಳಿದ 35 ಪ್ರತಿಶತ ಇರುವ ಇದೇ ಅತೀ ಹಿಂದುಳಿದ ಮತದಾರರು. ಕಳೆದ ಬಾರಿ ಬಿಜೆಪಿ ಕಡೆ ವಾಲಿದ್ದಅತೀ ಹಿಂದುಳಿದ ಮತದಾರರನ್ನು ಸೆಳೆಯಲು ಅಖಿಲೇಶ್ ಒಬ್ಬೊಬ್ಬರೇ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮಿ ಪ್ರಸಾದ ಮೌರ್ಯ, ದಾರಾ ಸಿಂಗ್ ಚೌಹಾನ, ಮುಖೇಶ್ ಸೈನಿ ಹೀಗೆ ಯೋಗಿ ಸಂಪುಟದಲ್ಲಿ ಮಂತ್ರಿ ಆಗಿದ್ದವರೆಲ್ಲ ಸಮಾಜವಾದಿ ತೆಕ್ಕೆಗೆ ಮರಳಿದ್ದಾರೆ.

ಒಂದು ವೇಳೆ ಯಾದವ ಮುಸ್ಲಿಮರ ಜೊತೆ ಅತೀ ಹಿಂದುಳಿದ ಸಮುದಾಯ ಗಳು ಅಖಿಲೇಶ್ ಯಾದವ್ ಜೊತೆ ಇನ್ನಷ್ಟು ವಾಲಿದರೆ ಯುಪಿ ಕುಸ್ತಿ ಯೋಗಿ ಮತ್ತು ಮೋದಿ ಗೆ ಇನ್ನಷ್ಟು ಕಠಿಣ ಆಗಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ಕನ್ನಡ ಪ್ರಭ ವಿಶೇಷ ಪ್ರತಿನಿಧಿ