Ukraine Crisis ಹೆರಿಗೆ ಆಸ್ಪತ್ರೆ ಸೇರಿ ಕಂಡ ಕಂಡಲ್ಲಿ ದಾಳಿ ನಡೆಸುತ್ತಿದೆ ರಷ್ಯಾ!

Mar 11, 2022, 5:47 PM IST

ಕೀವ್(ಮಾ.11): ಭೀಕರವಾಗುತ್ತಿದೆ ಹದಿನಾರನೇ ದಿನದ ಉಕ್ರೇನ್ ರಷ್ಯಾ ಯುದ್ಧ. ಉಕ್ರೇನ್‌ನಲ್ಲಿ ಕಂಡ ಕಂಡಲ್ಲಿ ರಷ್ಯಾದ ಕ್ಷಿಪಣಿ ದಾಳಿ ನಡೆಯುತ್ತಿದೆ. ಇಲ್ಲಿ ಆಸ್ಪತ್ರೆಗಳನ್ನೂ ಪುಟಟಿನ್ ಪಡೆ ಟಾರ್ಗೆಟ್ ಮಾಡುತ್ತಿದೆ. ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಎಲ್ಲವೂ ರಷ್ಯಾ ಸೇನೆ ಧ್ವಂಸಗೊಳಿಸುತ್ತಿದೆ.

ಮರಿಯುಪೋಲ್‌ ನಗರದ ಹೆರಿಗೆ ಆಸ್ಪತ್ರೆಯೊಂದರ ಮೇಲೆ ರಷ್ಯಾ ವೈಮಾನಿಕ ದಾಳಿ ನಡೆಸಿದೆ. ಈ ವೇಳೆ ಇನ್ನೇನು ಹೆರಿಗೆಗೆ ಒಳಗಾಗುತ್ತಿದ್ದ ಮಹಿಳೆಗೆ ತೀವ್ರ ಗಾಯಗಳಾಗಿವೆ. ಸ್ಫೋಟ ಎಷ್ಟುತೀವ್ರವಾಗಿತ್ತು ಎಂದರೆ ಅನೇಕ ಮೈಲಿ ದೂರದವರೆಗೆ ಶಬ್ದ ಕೇಳಿಸಿದೆ. ಅಕ್ಕಪಕ್ಕದ ಕಟ್ಟಡಗಳು ಸ್ಫೋಟದ ರಭಸಕ್ಕೆ ನಡುಗಿ ಹೋಗಿವೆ. ಇನ್ನು ಕೀವ್‌ ಸಮೀಪದ ಝೈತೋಮಿರ್‌ ಎಂಬ ನಗರದ 2 ಆಸ್ಪತ್ರೆಗಳ ಮೇಲೂ ರಷ್ಯಾ ಬಾಂಬ್‌ ಮಳೆಗರೆದಿದೆ. ಇದರಲ್ಲಿ ಒಂದು ಮಕ್ಕಳ ಆಸ್ಪತ್ರೆಯಾಗಿದೆ. ಸುದೈವವಶಾತ್‌ ಇಲ್ಲಿ ಸಾವು ನೋವು ಸಂಭವಿಸಿಲ್ಲ. ಮರಿಯುಪೋಲ್‌ ಆಸ್ಪತ್ರೆ ಮೇಲಿನ ದಾಳಿಯಲ್ಲಿ 17 ಮಂದಿ ಗಾಯಗೊಂಡಿದ್ದು ಮಾತ್ರ ಖಚಿತವಾಗಿದೆ.

ರಷ್ಯಾ ಈ ರೀತಿ ದಾಳಿ ನಡೆಸುತ್ತಿರುವುದಕ್ಕೆ ಉಕ್ರೇನ್‌ ತೀವ್ರ ಖಂಡನೆ ವ್ಯಕ್ತಪಡಿದೆ. ‘ಮಕ್ಕಳ ಆಸ್ಪತ್ರೆ ಮೇಲೂ ದಾಳಿ ನಡೆಸುವಷ್ಟುರಷ್ಯಾ ನಿಷ್ಕರುಣಿಯಾಗಿದೆ. ಇದೊಂದ ದೊಡ್ಡ ಅಪರಾಧ’ ಎಂದು ರಷ್ಯಾ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಹಾಗೂ ಉಕ್ರೇನ್‌ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾ ಮೇಲೆ ಪಾಶ್ಚಾತ್ಯ ದೇಶಗಳು ಇನ್ನಷ್ಟುಕಠಿಣ ನಿರ್ಬಂಧಗಳನ್ನು ಹೇರಬೇಕು. ಇದು ನರಮೇಧವಲ್ಲದೇ ಮತ್ತಿನ್ನೇನು ಎಂದು ಕಿಡಿಕಾರಿದ್ದಾರೆ.