ತುಘಲಕ್‌ ಲೇನ್‌ ಇನ್ಮುಂದೆ ರಾಹುಲ್‌ ಗಾಂಧಿ ವಿಳಾಸವಲ್ಲ, ಸರ್ಕಾರಿ ಬಂಗಲೆ ಖಾಲಿ ಮಾಡಿದ ಕಾಂಗ್ರೆಸ್‌ ನಾಯಕ!

Apr 22, 2023, 10:29 PM IST

ನವದೆಹಲಿ (ಏ.22): ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವ ಭರದಲ್ಲಿ ಇಡೀ ಮೋದಿ ಜಾತಿಯವರನ್ನು ಟೀಕೆ ಮಾಡಿ ಕೋರ್ಟ್‌ನಿಂದ ಶಿಕ್ಷೆಗೆ ಒಳಗಾಗಿದ್ದ ರಾಹುಲ್‌ ಗಾಂಧಿ, ಅದೇ ಕಾರಣಕ್ಕೆ ತಮ್ಮ ಲೋಕಸಭಾ ಸದಸ್ಯತ್ವವನ್ನೂ ಕಳೆದುಕೊಂಡಿದ್ದರು. ಇದರ ಬೆನ್ನಲ್ಲಿಯೇ ಅವರಿಗೆ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ನೋಟಿಸ್‌ ಕೂಡ ಜಾರಿ ಮಾಡಲಾಗಿತ್ತು.

ಈ ನೋಟಿಸ್‌ಗೆ ಒಂದು ತಿಂಗಳ ಕಾಲಾವಕಾಶ ಕೇಳಿದ್ದ ರಾಹುಲ್‌ ಗಾಂಧಿ, ಶನಿವಾರ ತುಘಲಕ್‌ ಲೇನ್‌ ರಸ್ತೆಯಲ್ಲಿದ್ದ ಸರ್ಕಾರಿ ಬಂಗಲೆಯನ್ನು ಅಧಿಕೃತವಾಗಿ ಖಾಲಿ ಮಾಡಿದ್ದಾರೆ. ಮನೆಯಲ್ಲಿದ್ದ ಸಾಮಾನು-ಸರಂಜಾಮುಗಳನ್ನು ಟ್ರಕ್‌ಗೆ ಹಾಕಿ ತಾಯಿ ಸೋನಿಯಾ ಗಾಂಧಿಯವರ ನಿವಾಸಕ್ಕೆ ಶಿಫ್ಟ್ ಆಗಿದ್ದಾರೆ. ಇದೇ ವೇಳೆ ಮಾತನಾಡಿದ ಅವರು ನಾನು ಸರ್ಕಾರದ ಸತ್ಯವನ್ನು ಬಯಲು ಮಾಡಿದ್ದಕ್ಕಾಗಿ ಈ ಬೆಲೆಯನ್ನು ತೆರುತ್ತಿದ್ದೇನೆ ಎಂದು ಹೇಳಿದ್ದಾರೆ.

 

ಇಂದು ಸರ್ಕಾರಿ ಬಂಗಲೆ ತೆರವು ಮಾಡಲಿರೋ ರಾಹುಲ್‌ ಗಾಂಧಿ: ಅಮ್ಮನ ಮನೆಗೆ ಶಿಫ್ಟ್‌ ಆಗ್ತಾರೆ ಕಾಂಗ್ರೆಸ್‌ ನಾಯಕ

"ಭಾರತದ ಜನರು 19 ವರ್ಷಗಳ ಕಾಲ ಈ ಮನೆಯನ್ನು ನನಗೆ ನೀಡಿದ್ದಾರೆ ಮತ್ತು ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಸತ್ಯವನ್ನು ಮಾತನಾಡಿದ್ದಕ್ಕೆ ಸಿಕ್ಕ ಬೆಲೆ ಮತ್ತು ಆ ಬೆಲೆಯನ್ನು ತೆರಲು ನಾನು ಸಿದ್ಧ" ಎಂದು ರಾಹುಲ್ ಹೇಳಿದರು. 10, ಜನಪಥ್‌ನಲ್ಲಿರುವ ತಮ್ಮ ತಾಯಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಕೆಲಕಾಲ ವಾಸ್ತವ್ಯ ಹೂಡಲಿದ್ದೇನೆ ಎಂದು ಇದೇ ವೇಳೆ ಹೇಳಿದ್ದಾರೆ.