ಪಿಪಿಇ ಕಿಟ್‌ ಧರಿಸಿ ಜೈಡಸ್ ಬಯೋಟೆಕ್‌ ಪಾರ್ಕ್‌ನಲ್ಲಿ ಮೋದಿ!

Nov 28, 2020, 3:23 PM IST

ಅಹಮದಾಬಾದ್(ನ.28) ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದ್‌, ಪುಣೆ ಮತ್ತು ಹೈದರಾಬಾದ್‌ನ ಕೊರೋನಾ ಲಸಿಕೆ ಉತ್ಪಾದನಾ ಘಟಕಗಳಿಗೆ ಭೇಟಿ ನೀಡಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್‌ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಖುದ್ದು ಅವಲೋಕನ ನಡೆಸಿದ್ದಾರೆ. ಕೊರೋನಾ 2ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಎಂಬ ವರದಿಗಳ ಬೆನ್ನಲ್ಲೇ ನಿಗದಿಯಾಗಿರುವ ಈ ಭೇಟಿ ಭಾರೀ ಕುತೂಹಲ ಕೆರಳಿಸಿದೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಭಾರತ ನಿರ್ಣಾಯಕ ಹಂತಕ್ಕೆ ತಲುಪಿರುವಾಗಲೇ, ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಲಸಿಕೆ ಅಭಿವೃದ್ಧಿ ಘಟಕಗಳು ಮತ್ತು ಲಸಿಕೆ ಸಿದ್ಧತೆ ಕುರಿತು ವಿಜ್ಞಾನಿಗಳೊಂದಿಗೆ ಚರ್ಚಿಸಲು ಮೂರು ಘಟಕಗಳಿಗೆ ಭೇಟಿ ನೀಡಿದ್ದಾರೆ. ಇದು ಎಲ್ಲಾ ಪ್ರಜೆಗಳಿಗೆ ಲಸಿಕೆ ನೀಡುವ ಯೋಜನೆಯ ಸಿದ್ಧತೆ, ಸವಾಲು ಮತ್ತು ಪ್ರಯತ್ನಗಳಿಗೆ ನೆರವಾಗಲಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.