2013ರಲ್ಲೇ ಒಲಿಂಪಿಕ್ಸ್ ಭವಿಷ್ಯ ನುಡಿದಿದ್ದ ಮೋದಿ: ಸಾಕಾರಗೊಳಿಸಿದ ನೀರಜ್ ಚೋಪ್ರಾ!

Aug 8, 2021, 1:22 PM IST

ನವದೆಹಲಿ(ಆ.08): 125 ವರ್ಷಗಳ ಇತಿಹಾಸವಿರುವ ಒಲಿಂಪಿಕ್ಸ್‌ನಲ್ಲಿ ಭಾರತ ಹೊಸ ಮೈಲಿಗಲ್ಲು ನೆಟ್ಟಿದೆ. ಅಥ್ಲೆಟಿಕ್ಸ್‌ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಚಿನ್ನಕ್ಕೆ ಮುತ್ತಿಕ್ಕುವ ಮೂಲಕ ‘ಶತಮಾನದ ಸಾಧನೆ’ ಮಾಡಿದೆ. ನೀರಜ್‌ ಚೋಪ್ರಾ ಎಂಬ 23 ವರ್ಷದ ‘ವೀರ ಯೋಧ’ ಜಾವೆಲಿನ್‌ ಥ್ರೋ (ಭರ್ಜಿ ಎಸೆತ) ವಿಭಾಗದಲ್ಲಿ ಜಾಗತಿಕ ಸ್ಪರ್ಧಿಗಳನ್ನು ಹಿಂದಿಕ್ಕಿ ಬಂಗಾರ ಬೇಟೆಯಾಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪ್ರತಿನಿಧಿಸಿದ ಕಟ್ಟಕಡೆಯ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ, ದೇಶಕ್ಕೆ ಮೊದಲ ಚಿನ್ನದ ಪದಕದ ಹಿರಿಮೆ ತಂದುಕೊಟ್ಟಿದ್ದಾರೆ. ತನ್ಮೂಲಕ, ಭಾರತದ 135 ಕೋಟಿ ಜನತೆ ಉಲ್ಲಾಸದಿಂದ ಸಂಭ್ರಮಿಸುವಂತೆ ಮಾಡಿದ್ದಾರೆ. ಭಾರತೀಯ ಸೇನೆಯಲ್ಲಿ ಸುಬೇದಾರ್‌ ಹುದ್ದೆಯಲ್ಲಿರುವ ನೀರಜ್‌ ಸಾಧನೆಯನ್ನು ಇಡೀ ದೇಶ ಮನದಣಿಯೆ ಕೊಂಡಾಡಿದೆ.

ಈ ನಡುವೆ ಪ್ರಧಾನಿ ನರೇಂದ್ರ ಮೋದಿ 2013ರಲ್ಲಿ ಮಾಡಿದ್ದ ಭಾಷಣವೊಂದರ ವಿಡಿಯೋ ತುಣುಕು ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೋದಿಯವರು ಒಲಿಂಪಿಕ್ಸ್ ಬಗ್ಗೆ ಮಾತನಾಡುತ್ತಾ ಕ್ರೀಡೆಯನ್ನು ಶಿಕ್ಷಣ ವ್ಯವಸ್ಥೆ ಜೊತೆ ಗಂಭೀರವಾಗಿ ಪರಿಗಣಿಸಿದ್ದೇವಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಯೋಧರನ್ನು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆಯೂ ಮಾತನಾಡಿರುವ ಅವರು, ಭಾರತೀಯ ಯೋಧರಿಗೆ ಸೂಕ್ತ ತರಬೇತಿ ಕೊಟ್ಟರೆ ಪದಕಗಳು ನಮ್ಮದೇ ಎಂದಿದ್ದಾರೆ. ಅವರು ಅಂದು ನುಡಿದಿದ್ದ ಮಾತುಗಳು ಇಂದು ನೀರಜ್ ಚೋಪ್ರಾ ಸಾಧನೆಯಿಂದ ನಿಜವಾಗಿವೆ.