
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷಕ್ಕೆ ಬಿಹಾರ ಮೂಲದ ನಿತಿನ್ ನಬೀನ್ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯ ಹಿಂದೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಡುವಿನ ಸಂಬಂಧವನ್ನು ಸರಿಪಡಿಸುವ ತಂತ್ರವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರು: 1984ರಲ್ಲಿ ಕೇವಲ ಎರಡೇ ಎರಡು ಸೀಟು ಗೆದ್ದಿದ್ದ ಪಕ್ಷ, ಇವತ್ತು ಭಾರತದ ಮೂಲೆ ಮೂಲೆಯಲ್ಲೂ ಭದ್ರವಾಗಿ ಬೇರೂರಿದೆ ಅಂದರೆ, ಅದಕ್ಕೆ ಕಾರಣ ಇಲ್ಲಿನ ಶಿಸ್ತು ಮತ್ತು ಕಾರ್ಯಕರ್ತರ ಸೈನ್ಯ. ಯಾರೋ ಒಬ್ಬ ನಾಯಕ ಬಂದು ಇಡೀ ಪಕ್ಷವನ್ನ ನಡೆಸೋ ಪದ್ಧತಿ ಇಲ್ಲಿಲ್ಲ. ಬದಲಿಗೆ ಕೆಳಗಿನ ಹಂತದ ಕಾರ್ಯಕರ್ತನೂ ಕೂಡ ಅತ್ಯುನ್ನತ ಸ್ಥಾನಕ್ಕೆ ಏರಬಲ್ಲ ವ್ಯವಸ್ಥೆ ಇದೆ. ಯಾವುದೇ ಗದ್ದಲವಿಲ್ಲದೆ, ವಿವಾದಗಳಿಲ್ಲದೆ ಸದ್ದಿಲ್ಲದಂತೆ ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಆ ಪಕ್ಷದ ಸ್ಪೆಷಾಲಿಟಿ. ಅದೇ ಭಾರತೀಯ ಜನತಾ ಪಕ್ಷ. ಈಗ ಆ ಪಕ್ಷದ ಹೊಸ ಅಧ್ಯಕ್ಷರ ಆಯ್ಕೆಯಲ್ಲೂ ಕೂಡ ಅಂಥದ್ದೇ ಸಂಚಲನ ಸೃಷ್ಟಿಯಾಗಿದೆ. ಅದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದೆ
14 ಕೋಟಿಗೂ ಹೆಚ್ಚಿನ ನೊಂದಾಯಿತ ಸದಸ್ಯರೊಂದಿಗೆ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂಬ ಹಿರಿಮೆ ಹೊಂದಿರುವ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾಗಿ ಬಿಹಾರ ಮೂಲದ ನಿತಿನ್ ನಬೀನ್ ಆಯ್ಕೆಯಾಗಿದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಅವರು ಏಕಾಂಗಿ ಅಭ್ಯರ್ಥಿಯಾಗಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ಕುರಿತು ಮಂಗಳವಾರ ಅಧಿಕೃತ ಘೋಷಣೆ ಹೊರಬಿದ್ದಿದೆ.
ಕೇಸರಿ ಪಾಳೆಯದಲ್ಲಿ ಈಗೀಗ ಒಂದು ಮಾತು ಕೇಳಿ ಬಂದಿತ್ತು. ವಿಪಕ್ಷ ನಾಯಕರೂ ಸಹ, ಅದನ್ನೇ ಹಲವು ಸಲ ಹೇಳಿದ್ರು. ಅದೇನು ಅಂದ್ರೆ, ಭಾರತೀಯ ಜನತಾ ಪಾರ್ಟಿಗೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೂ ನಡುವೆ, ಎಲ್ಲವೂ ಸರಿ ಇಲ್ಲ ಅಂತ. ಆ ಮಾತು ಮೊನ್ನೆ ತನಕ ಹಸಿಹಸಿಯಾಗಿಯೇ ಇತ್ತು. ಅದನ್ನ ನಿವಾರಿಸೋದಕ್ಕಂತಲೇ ಪದ್ಮಪಾಳಯ ನಿತಿನ್ ವ್ಯೂಹ ರಚಿಸಿದೆ ಅನ್ನೋದು, ಹಲವರ ತರ್ಕ. ಅದಕ್ಕೆ ಕಾರಣ ಏನು ಗೊತ್ತಾ?