ಒಮಿಕ್ರಾನ್ ತಡೆಗೆ (Omicron Variant) ದೇಶದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ (Booster Dose) ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಜಿನೋಮ್ ಸಿಕ್ವೆನ್ಸಿಂಗ್ ಕನ್ಸೋರ್ಟಿಯಂನ ವಿಜ್ಞಾನಿಗಳ ತಂಡ ಸಲಹೆ ನೀಡಿದೆ.
ಬೆಂಗಳೂರು (ಡಿ. 04): ರಾಜಧಾನಿಯ (Bengaluru) ಇಬ್ಬರಲ್ಲಿ ಒಮಿಕ್ರೋನ್ ಸೋಂಕು (Omicron Variant) ಪತ್ತೆಯಾದ ಎರಡೇ ದಿನದಲ್ಲಿ ದೇಶದಲ್ಲಿ ಮತ್ತೆ ಇಬ್ಬರಿಗೆ ಈ ರೂಪಾಂತರಿ ವೈರಸ್ ತಗುಲಿರುವುದು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಮಿಕ್ರಾನ್ ವೈರಸ್ ಸೋಂಕಿಗೆ ತುತ್ತಾದವರ ಸಂಖ್ಯೆ 4 ಕ್ಕೇರಿದೆ. ಒಮಿಕ್ರಾನ್ ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಟಫ್ ರೂಲ್ಸ್ (Tough Rules) ಜಾರಿಗೊಳಿಸಿದೆ. 2 ಡೋಸ್ ಲಸಿಕೆ ಕೊಡುವುದನ್ನು ತ್ವರಿತಗೊಳಿಸಿದೆ. ಬೂಸ್ಟರ್ ಡೋಸ್ (Booster Dose) ಕೊಡಲು ಸರ್ಕಾರ ಚಿಂತನೆ ನಡೆಸಿದೆ.
ದೇಶದಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಜಿನೋಮ್ ಸಿಕ್ವೆನ್ಸಿಂಗ್ ಕನ್ಸೋರ್ಟಿಯಂನ ವಿಜ್ಞಾನಿಗಳ ತಂಡ ಸಲಹೆ ನೀಡಿದೆ. ಇದುವರೆಗೂ ಲಸಿಕೆ ಪಡೆಯದೆ ಇರುವವರೆಲ್ಲರಿಗೂ ಆದ್ಯತೆಯ ಮೇರೆಗೆ ಲಸಿಕೆ (Corona Vaccine) ನೀಡಬೇಕು. ರೋಗ ನಿರೋಧಕ ಸಾಮರ್ಥ್ಯ ಕಡಿಮೆ ಇರುವ 40 ವರ್ಷ ಮೇಲ್ಪಟ್ಟವರಲ್ಲಿ ಈ ವೈರಸ್ ಹೆಚ್ಚು ಹರಡುವ ಮತ್ತು ವೈರಸ್ ಬಾಧಿಸುವ ಸಾಧ್ಯತೆಯಿದೆ. ಜತೆಗೆ ಸೋಂಕಿತ ವ್ಯಕ್ತಿಯ ಜಿನೋಮ್ ಪರೀಕ್ಷೆಯಿಂದ ಯಾವ ವೈರಸ್ ಇದೆ ಎಂಬುದನ್ನು ಪತ್ತೆ ಹಚ್ಚಲು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರೆಲ್ಲರಿಗೂ ಬೂಸ್ಟರ್ ಡೋಸ್ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದೆ.