Nov 20, 2021, 5:31 PM IST
ನವದೆಹಲಿ(ನ.20): ರಾತ್ರೋ ರಾತ್ರಿ ನಿರ್ಧಾರ, ಬೆಳ್ಳಂ ಬೆಳಗ್ಗೆ ಘೋಷಣೆ. ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ದಿಢೀರ್ ಅಂತ ವಾಪಾಸ್ ಪಡೆದ್ರು ಪ್ರಧಾನಿ ಮೋದಿ. ಮುಂದಿಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂದಿದ್ದ ಮೋದಿ ಇದ್ದಕ್ಕಿದ್ದಂತೆ ರಿವರ್ಸ್ ಗೇರ್ ಹಾಕಿದ್ದೇಕೆ? ಮೋದಿ ಮಾಸ್ಟರ್ ಸ್ಟ್ರೋಕ್ ನಿರ್ಧಾರದ ಹಿಂದಿದ್ಯಾ ಉತ್ತರ ಗೆಲ್ಲುವ ರಣತಂತ್ರ?
ಹೌದು ಮಹತ್ವದ ಬೆಳವಣಿಗೆಯೊಂದರಲ್ಲಿ, ದೆಹಲಿಯ ಗಡಿ ಹಾಗೂ ವಿವಿಧ ರಾಜ್ಯಗಳಲ್ಲಿ ಒಂದು ವರ್ಷದಿಂದ ರೈತರ ಪ್ರತಿಭಟನೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.
ಹೆಚ್ಚಾಗಿ ಸಿಖ್ ರೈತರಿಂದಲೇ ಆಕ್ರೋಶಕ್ಕೆ ಗುರಿಯಾಗಿದ್ದ ಈ ಕಾಯ್ದೆಗಳನ್ನು ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಹುಟ್ಟುಹಬ್ಬದ ದಿನವೇ ಹಿಂಡೆಯುವುದಾಗಿ ಘೋಷಿಸಿರುವ ಅವರು, ‘ಚಳಿಗಾಲದ ಸಂಸತ್ ಅಧಿವೇಶನದಲ್ಲಿ (ನ.29ರಿಂದ ಆರಂಭ) ಕಾಯ್ದೆ ರದ್ದತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪ್ರತಿಭಟನೆ ನಡೆಸುತ್ತಿರುವ ರೈತ ಬಾಂಧವರೆಲ್ಲ ಮನೆಗೆ ಮರಳಬೇಕು’ ಎಂದು ಮನವಿ ಮಾಡಿದ್ದಾರೆ.