2020 Delhi Riots Case: ಗಲಭೆಗೆ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಪಿತೂರಿ!

Feb 4, 2022, 12:58 PM IST

ನವದೆಹಲಿ (ಫೆ. 04):  ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟದ ವೇಳೆ ಸಂಭವಿಸಿದ ಭೀಕರ ಹಿಂಸಾಚಾರ ಪ್ರಕರಣ ಸಂಪೂರ್ಣವಾಗಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್‌ ಖಾಲಿದ್‌ ಸಂಚು ಎಂದು ಕೇಂದ್ರ ಸರ್ಕಾರ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆ, ವಾಟ್ಸಾಪ್‌ ಚಾಟ್‌, ಸಿಸಿಟೀವಿ ದೃಶ್ಯಾವಳಿ ಮುಂತಾದ ಸಾಕ್ಷ್ಯಗಳನ್ನು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಬುಧವಾರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಉಮರ್‌ ಖಾಲಿದ್‌ ಜಾಮೀನು ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲ ಅಮಿತ್‌ ಪ್ರಸಾದ್‌, ಉಮರ್‌ ಖಾಲಿದ್‌ ಶಾಂತಿಯುತ ಪ್ರತಿಭಟನೆಯ ಹೆಸರಲ್ಲಿ ಗಲಭೆ ಪ್ರಚೋದಿಸಲು ಯೋಜಿತವಾದ ಸಂಚು ರೂಪಿಸಿದ್ದರು. ಜ.23, 2020ರಂದು ಭಾಗಿಯಾದ ಸಭೆಯಲ್ಲಿ ರಕ್ತ ಚೆಲ್ಲುವ ಮಾತನಾಡಿದ್ದರು. ಗಲಭೆಯ ಸಂಚಿನಲ್ಲಿ ಅವರ ಸ್ನೇಹಿತರ ಪಾತ್ರವೂ ಇದೆ. ಗಲಭೆ ಉದ್ದೇಶದಿಂದ ಇತರ ಪ್ರದೇಶಗಳಿಂದ ಜನರನ್ನು ಕರೆತರಲಾಗಿತ್ತು ಎಂದು ಸಾಕ್ಷಿ ಸಮೇತ ವಿವರಿಸಿದರು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಪಂಜಾಬ್ ಸಿಎಂ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಬಂಧನ!

‘ವಾಟ್ಸಾಪ್‌ ಗ್ರೂಪ್‌ ಚಾಟ್‌ನಲ್ಲಿ ದೆಹಲಿಯ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಎಲ್ಲಾ ಯೋಜನೆಗಳೂ ರೂಪಿತವಾಗಿದ್ದವು ಎನ್ನುವುದು ಬಹಿರಂಗಗೊಂಡಿದೆ. ‘ಬೆಂಕಿ ಹಚ್ಚೋಕೆ ನಾವು ಸಂಪೂರ್ಣ ತಯಾರಾಗಿದ್ದೇವೆ. ದೊಣ್ಣೆ, ಕಲ್ಲು, ಖಾರದ ಪುಡಿ ಎಲ್ಲವನ್ನೂ ಸಿದ್ಧ ಮಾಡಿಕೊಳ್ಳಿ, ಈಗ ನಾವು ಹಿಂಸಾಚಾರವನ್ನು ಕೊನೆ ಮಾಡಬೇಕು’ ಎನ್ನುವ ಸಂದೇಶಗಳು ಅದರಲ್ಲಿ ಹರಿದಾಡಿವೆ. ಜನವರಿ 15 ಹಾಗೂ 16ರಂದು ಶಾಂತಿಸಭೆ ಎನ್ನುವ ಹೆಸರಿನಲ್ಲಿ ಚಾಂದ್‌ಬಾಗ್‌ನಲ್ಲಿ ಸಭೆ ನಡೆಸಲಾಗಿತ್ತು.

ಈ ಸಭೆಯ ಮೂಲಕವೂ ದೊಣ್ಣೆ, ಕಲ್ಲು, ಖಾರದ ಪುಡಿ ಹಾಗೂ ಆ್ಯಸಿಡ್‌ ಸಂಗ್ರಹಣೆ ಮಾಡಲಾಗಿತ್ತು. ಶಾಂತಿ ಉದ್ದೇಶದ ಸಭೆ ಆಗಿದ್ದಲ್ಲಿ ಇಂಥ ವಸ್ತುಗಳನ್ನು ಏಕೆ ಸಂಗ್ರಹಣೆ ಮಾಡಲಾಗುತ್ತಿತ್ತು?’ ಎಂದು ವಕೀಲರು ಪ್ರಶ್ನಿಸಿದ್ದಾರೆ. ಅಲ್ಲದೆ ಈ ವೇಳೆ ಉಮರ್‌ ಖಾಲಿದ್‌, ‘ಸರ್ಕಾರ ಮುಸ್ಲಿಮರ ವಿರುದ್ಧವಾಗಿದೆ. ಭಾಷಣಗಳು ಕೆಲಸ ಮಾಡುವುದಿಲ್ಲ. ನಾವು ರಕ್ತ ಹರಿಸಬೇಕಿದೆ’ ಎಂದಿದ್ದರು ಎಂದು ತಿಳಿಸಿದರು.