Feb 19, 2022, 5:11 PM IST
ಪಂಜಾಬ್ ಚುನಾವಣೆಯಲ್ಲಿ ಆಪ್ ಗೆಲ್ಲಲು ಹವಣಿಸುತ್ತಿದ್ದರೆ, ಆ ಪಕ್ಷಕ್ಕೆ ಮಾರಕ ಆಗುವ ಗಂಭೀರ ಆರೋಪವನ್ನು ಆಮ್ ಆದ್ಮಿ ಪಕ್ಷದ ಮಾಜಿ ಮುಖಂಡ ಕುಮಾರ್ ವಿಶ್ವಾಸ್ ಮಾಡಿದ್ದಾರೆ.
‘2017ರ ವಿಧಾನಸಭೆ ಚುನಾವಣೆ ವೇಳೆ ಉಗ್ರ ಸಂಘಟನೆಗಳು, ಖಲಿಸ್ತಾನಿ ಚಳವಳಿಯಿಂದ ಅಂತರ ಕಾಯ್ದುಕೊಳ್ಳುವಂತೆ ಕೇಜ್ರಿವಾಲ್‌ಗೆ ಸಲಹೆ ನೀಡಿದ್ದೆ. ಆದರೆ ಅವರು ನನ್ನ ಮಾತನ್ನು ಕೇಳಲಿಲ್ಲ. ಜತೆಗೆ ನಾನು ಪಂಜಾಬ್‌ಗೆ ಮುಖ್ಯಮಂತ್ರಿಯಾಗುತ್ತೇನೆ ಅಥವಾ ಖಲಿಸ್ತಾನದ ಮೊದಲ ಪ್ರಧಾನ ಮಂತ್ರಿಯಾಗುತ್ತೇನೆ ಎಂದಿದ್ದರು’ ಎಂದು ಈ ಹಿಂದೆ ಕೇಜ್ರಿವಾಲ್ ಅವರ ಅತ್ಯಾಪ್ತರಾಗಿದ್ದ ವಿಶ್ವಾಸ್ ಹೇಳಿದ್ದಾರೆ.
‘ಬಿಜೆಪಿ, ಕಾಂಗ್ರೆಸ್ ನನ್ನ ವಿರುದ್ಧ ಗುಂಪುಕಟ್ಟಿ, ನನಗೆ ಉಗ್ರನ ಪಟ್ಟಕಟ್ಟುತ್ತಿದ್ದಾರೆ. ಇದು ಹಾಸ್ಯಾಸ್ಪದ. ಇದೇ ನಿಜವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಇನ್ನುವರೆಗೆ ನನಗೆ ಯಾಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ. ಕೇಜ್ರಿ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಆಮ್ ಆದ್ಮಿ ಪಕ್ಷ ಹಾಗೂ ನಿಷೇಧಿತ ಸಿಖ್ಖರ ಭಯೋತ್ಪಾದಕ ಸಂಘಟನೆ ನಡುವಿನ ಸಂಬಂಧದ ಬಗ್ಗೆ ತನಿಖೆಗೆ ಚನ್ನಿ ಕೋರಿದ್ದಾರೆ. ಇದನ್ನು ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ.