ಕೊರೋನಾ, ಮಂಕಿಪಾಕ್ಸ್‌ ಆಯ್ತು, ಕರಾವಳಿಯಲ್ಲೀಗ ಇಲಿಜ್ವರದ ಆತಂಕ !

Jul 26, 2022, 10:26 AM IST

ಕೊರೋನಾ, ಮಂಕಿಪಾಕ್ಸ್‌ ಆಯ್ತು, ಈಗ ಕರಾವಳಿಯಲ್ಲಿ ಇಲಿಜ್ವರದ ಆತಂಕ ಶುರುವಾಗಿದೆ. ಉಡುಪಿಯಲ್ಲಿ 85 ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬ ಯುವಕ ಮೃತಪಟ್ಟಿದ್ದಾನೆ. ಮಂಗಳೂರು ನಗರವೊಂದರಲ್ಲೇ ಜುಲೈ ತಿಂಗಳಲ್ಲಿ ಇಲಿಜ್ವರದ 17ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇಲಿ ಜ್ವರ, ಸಾಮಾನ್ಯ ಜ್ವರದಂತೆ ಕಂಡರೂ, ಮಾರಕವಾಗಿದೆ. ವಿಶೇಷವಾಗಿ ಮಳೆಗಾಲ, ನೆರೆ-ಪ್ರವಾಹದ ಬಳಿಕ ಕಾಣಿಸಿಕೊಳ್ಳುವ ಸಾಮಾನ್ಯ ಜ್ವರದ ಬಗ್ಗೆ ನಿರ್ಲಕ್ಷ್ಯ ಖಂಡಿತಾ ಸಲ್ಲದು. ಸಾರ್ವಜನಿಕರು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ರೋಗ ಸರ್ವೇಕ್ಷೇಣಾಧಿಕಾರಿ ಡಾ. ಪ್ರವೀಣ್‌ ಕುಮಾರ್‌ ಸಿ.ಎಚ್‌. ಎಚ್ಚರಿಸಿದ್ದಾರೆ.

ಇಲಿಜ್ವರ ಎಂದರೇನು ?
ಇಲಿಜ್ವರ (Rat Fever) ಲೆಪ್ಟೋಸ್ಪೈರ ಎಂಬ ಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ರೋಗ. ಈ ರೋಗಾಣು ಪ್ರಾಣಿಗಳ ಮೂತ್ರದಲ್ಲಿದ್ದು, ಇಂಥಾ ಸೋಂಕು ದೇಹವನ್ನು ಸೇರಿ ಮನುಷ್ಯರಿಗೆ ಕಾಯಿಲೆ (Disease) ಹರಡುತ್ತದೆ. ಕ್ರಮಬದ್ಧವಾದ ಚಿಕಿತ್ಸೆಯಿಂದ ಈ ಸೋಂಕನ್ನು (Virus) ಸಂಪೂರ್ಣವಾಗಿ ಗುಣಪಡಿಸಬಹುದು. ಹೃದಯ (Heart), ಶ್ವಾಸಕೋಶ, ಮೂತ್ರಪಿಂಡ ಸೋಂಕು ಬಹಳ ವಿರಳವಾಗಿದ್ದರೂ ಅವುಗಳಲ್ಲಿ ಸೋಂಕು ಕಾಣಿಸಿಕೊಂಡರೆ ತೀವ್ರ ವಿಳಂಬವಾಗಿ ನೀಡುವ ಚಿಕಿತ್ಸೆಯಿಂದ ತೊಂದರೆ ಸಹ ಉಂಟಾಗಬಹುದು. 

ಸೀಸನಲ್ ರೋಗಗಳನ್ನು ದೂರ ಮಾಡಲು ಸೇವಿಸಿ ಬೇವಿನ ಚಹಾ

ಇಲಿಜ್ವರದ ಲಕ್ಷಣಗಳೇನು?
ಜ್ವರ, ಮಾಂಸ ಖಂಡಗಳ ನೋವು, ತಲೆನೋವು, ವಾಂತಿ ಬೇಧಿ ಮತ್ತು ಹೊಟ್ಟೆನೋವು, ಕೆಲವು ರೋಗಿಗಳಲ್ಲಿ ಪಿತ್ತ ಕಾಮಾಲೆ ಲಕ್ಷಣಗಳೂ ಕಂಡುಬರುವ ಸಾಧ್ಯತೆ ಇದೆ. ಬಾಯಿ, ಮೂಗು ರಕ್ತದಲ್ಲಿ ರಕ್ತಸ್ರಾವ ಆಗಬಹುದು. ಮೂತ್ರಪಿಂಡ ಸೋಂಕು ಉಂಟಾಗಿ ಮೂತ್ರ ವಿಸರ್ಜನೆ ಕಡಿಮೆಯಾಗಬಹುದು. ಹೃದಯದ ಸೋಂಕು ಉಂಟಾಗಬಹುದು.

ಇಲಿಜ್ವರದ ಬಗ್ಗೆ ಹೇಗೆ ಎಚ್ಚರ ವಹಿಸಬೇಕು?:
ಸ್ನಾನ ಮತ್ತು ಕುಡಿಯಲು ಉಪಯೋಗಿಸುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರದಂತೆ ನೀರಿನ ಶೇಖರಣಾ ತೊಟ್ಟಿಗಳಿಗೆ ಭದ್ರವಾಗಿ ಮುಚ್ಚಳ ಹಾಕಬೇಕು. ಕೊಳ, ಹೊಂಡ ನಿಂತ ನೀರಿನಲ್ಲಿ ಸ್ನಾನ ಮಾಡಬಾರದು ಹಾಗೂ ಸೇವಿಸಬಾರದು. ಆಹಾರ ಪದಾರ್ಥಗಳು, ಹಣ್ಣು ತರಕಾರಿಗಳು ಇಲಿಗಳಿಗೆ ಸಿಗದಂತೆ ದಾಸ್ತಾನು ಮಾಡಬೇಕು. ಮನೆ, ಗೋದಾಮು, ಅಂಗಡಿ, ಚರಂಡಿ, ಹೊಲ, ಗದ್ದೆ, ಪರಿಸರದಲ್ಲಿ ಇಲಿಗಳು ವಾಸಮಾಡದಂತೆ ಹಾಗೂ ಸಂತಾನ ವೃದ್ಧಿಯಾಗದಂತೆ ಬಿಲ, ಕಿಂಡಿಗಳನ್ನು ಮುಚ್ಚಬೇಕು. ಪರಿಸರ ಸ್ವಚ್ಛವಾಗಿದ್ದರೆ ರೋಗ ಹರಡುವ ಸಾಧ್ಯೆಗಳು ಕಡಿಮೆಯಾಗುತ್ತವೆ.