ಮಂಡ್ಯ: ಪಾರ್ಸಲ್​ ಡೆಲಿವರಿ ನೆಪದಲ್ಲಿ ಒಂಟಿ ಮನೆಗೆ ಬಂದು, ಮರದ ಯಂತ್ರದಿಂದ ರೈತನ ಕತ್ತು ಕೊಯ್ದ!

Dec 22, 2024, 12:24 PM IST

ಮಂಡ್ಯ (ಡಿ.22): ಆನ್‌ಲೈನ್ ಗೇಮಿಂಗ್ ಆ್ಯಪ್‌ ಮೂಲಕ ಆಟವಾಡತ್ತಾ ಸಾಲ ಮಾಡಿಕೊಂಡಿದ್ದ ಆರೋಪಿ ತಾನು ಹಣ ಮಾಡುವುದಕ್ಕೆ ಮರ ಕತ್ತರಿಸುವ ಯಂತ್ರದಿಂದ ಸಿಕ್ಕ ಸಿಕ್ಕವರನ್ನು ಕತ್ತರಿಸಿ ಹಣ ದರೋಡೆ ಮಾಡುವುದಕ್ಕೆ ಮುಂದಾಗಿದ್ದನು. ಇದೇ ರೀತಿ ಬೆಂಗಳೂರು ಮೈಸೂರು ರಾಷ್ಟ್ರೀಹೆ ಹೆದ್ದಾರಿಗೆ ಹೊಂದಿಕೊಂಡಿರುವ ಮಂಡ್ಯ ಜಿಲ್ಲೆಯ ಕ್ಯಾತನಹಳ್ಳಿಯಲ್ಲಿ ಒಂಟಿ ಮನೆಗೆ ನುಗ್ಗಿ ರೈತನೊಬ್ಬನನ್ನು ಕತ್ತರಿಸಿ ಕೊಲೆ ಮಾಡಿದ್ದು, ಆತನ ಹೆಂಡತಿ ಮೇಲೆಯೂ ಹಲ್ಲೆ ಮಾಡಿದ್ದಾನೆ. ಕೂಡಲೇ ಆತನಿಂದ ತಪ್ಪಿಸಿಕೊಂಡು ಮನೆಯಿಂದ ಹೊರಬಂದ ಮಹಿಳೆ ಆತನನ್ನು ಮನೆಯೊಳಗೆ ಕೂಡಿ ಹಾಕಿ ಅಕ್ಕಪಕ್ಕದವರನ್ನು ಸಹಾಯಕ್ಕೆ ಕರೆದಿದ್ದಾಳೆ. ನಂತರ ನೆರೆ ಹೊರೆಯವರು ಸಹಾಯಕ್ಕೆ ಬಂದು ಪೊಲೀಸರಿಗೆ ಕರೆ ಮಾಡಿದ್ದಾರೆ. ಆಗ ಕೊಲೆಗಾರ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಹೌದು, ಮಂಡ್ಯದಲ್ಲಿ‌ ಬೆಚ್ಚಿ ಬೀಳಿಸುವ ಕೊಲೆ ನಡೆದಿದೆ. ದರೋಡೆ ಮಾಡಲು ಬಂದವನಿಂದ ಬರ್ಬರ ಹತ್ಯೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಗ್ರಾಮದ ಒಂಟಿ ಮನೆಯಲ್ಲಿ ವಾಸವಿದ್ದ ರೈತ ರಮೇಶ್ ಕೊಲೆಯಾದ ದುರ್ದೈವಿ. ನಿನ್ನೆ ಸಂಜೆ 7 ಗಂಟೆ ವೇಳೆಗೆ ತೋಟದ ಮನೆಗೆ ಬಂದ ಅನಾಮಧೇಯ ವ್ಯಕ್ತಿ ರಮೇಶ್ ಹಾಗೂ ಅವರ ಪತ್ನಿ ಯಶೋದಮ್ಮರನ್ನು ಮಾತನಾಡಿಸಿದ್ದಾನೆ. ನಿಮ್ಮ ಮನೆಗೆ ಮರ ಕತ್ತರಿಸುವ ಯಂತ್ರ ಬಂದಿದೆ. ನಿಮ್ಮ ಮನೆಯವರೆ ಆರ್ಡರ್ ಮಾಡಿದಾರೆ ತಗೋಳಿ‌ ಎಂದಿದ್ದಾನೆ. ಆದರೆ, ಬಳಿಕ ನಾವು ಯಾರು ಆರ್ಡರ್ ಮಾಡಿಲ್ಲ ಎಂದು ಯಶೋಧಮ್ಮ ಹೇಳಿದ್ದಾಳೆ. ಈ ವೇಳೆ ಯಂತ್ರವನ್ನು ಆನ್ ಮಾಡಿ ಯಶೋಧಮ್ಮ ಕುತ್ತಿಗೆಗೆ ಹಿಡಿದಿದ್ದಾನೆ. ಆಕೆಯ ಮುಖದ ಭಾಗ ತುಂಡಾಗಿದ್ದು ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. 

ನಂತರ, ಮನೆಯ ಒಳಗೆ ನುಗ್ಗಿದ ವ್ಯಕ್ತಿ ಅನಾರೋಗ್ಯದಿಂದ (ಸ್ಟ್ರೋಕ್) ಮಲಗಿದ್ದ ರಮೇಶ್ ಅವರ ಬಳಿ ಹೋಗಿ ಮರ ಕತ್ತರಿಸುವ ಯಂತ್ರ ಆನ್ ಮಾಡಿ ಮಲಗಿದ್ದ ರಮೇಶ್ ಕುತ್ತಿಗೆಗೆ ಹಿಡಿದು ಕೊಲೆ ಮಾಡಿದ್ದಾನೆ. ಆಗ ಎಚ್ಚರಗೊಂಡ ಮಹಿಳೆ ಯಶೋಧಮ್ಮ ಮನೆಯಿಂದ ಹೊರಗೆ ಬಂದು ಮನೆಯ ಬಾಗಿಲು ಹಾಕಿ‌ ಲಾಕ್ ಮಾಡಿದ್ದಾಳೆ. ಬಳಿಕ ಸ್ಥಳೀಯರನ್ನು ಕೂಗಿ ಕರೆದಿದ್ದಾರೆ. ನಂತರ ಸ್ಥಳಕ್ಕೆ ಸ್ಥಳೀಯರು ಆಗಮಿಸಿದ್ದು, ಮನೆಯ ಒಳಭಾಗದಲ್ಲಿ ಕೊಲೆಪಾತಿ ಸಿಕ್ಕಿಬಿದ್ದಿದ್ದಾನೆ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರೂ ಸ್ಥಳಕ್ಕೆ ಬಂದಿದ್ದಾರೆ. ಶ್ರೀಗರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತನನ್ನು ಪೊಲೀಸರು ಹಿಡಿದು ವಿಚಾರಣೆ ಮಾಡಿದಾಗ ತಾನು ಆನ್‌ಲೈನ್ ಗೇಮಿಂಗ್ ಆ್ಯಪ್‌ ಮೂಲಕ ಆಟವಾಡಿ ಸಾಲದ ಶೂಲಕ್ಕೆ ಸಿಲುಕಿದ್ದು, ಇದರಿಂದ ತಪ್ಪಿಸಿಕೊಳ್ಳಲು ಹಣಕ್ಕಾಗಿ ದರೋಡೆಗೆ ಮುಂದಾಗಿದ್ದಾಗಿ ಹಾಗೂ ಅಡ್ಡ ಬಂದವನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ.