ರಾಜ್ಯದ ಪ್ರಸಿದ್ಧ ಪ್ರವಾಸಿತಾಣ ಮುರ್ಡೇಶ್ವರದ (Murudeshwara) ಶಿವನ ಪ್ರತಿಮೆ ಮೇಲೆ ಐಸಿಸ್ (ISIS)ಉಗ್ರರ ವಕ್ರದೃಷ್ಟಿಬಿದ್ದಿದೆಯೇ?.
ಭಟ್ಕಳ (ನ. 24): ರಾಜ್ಯದ ಪ್ರಸಿದ್ಧ ಪ್ರವಾಸಿತಾಣ ಮುರ್ಡೇಶ್ವರದ (Murudeshwara) ಶಿವನ ಪ್ರತಿಮೆ ಮೇಲೆ ಐಸಿಸ್ (ISIS)ಉಗ್ರರ ವಕ್ರದೃಷ್ಟಿಬಿದ್ದಿದೆಯೇ?. ಇಲ್ಲಿನ ಶಿವನ ಪ್ರತಿಮೆಯ ತಲೆಯ ಭಾಗವನ್ನು ಕತ್ತರಿಸಿ ಐಸಿಸ್ ಧ್ವಜ ಹೋಲುವ ಧ್ವಜವನ್ನು ಅಳವಡಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಂಥದ್ದೊಂದು ಶಂಕೆ ಮೂಡುವಂತೆ ಮಾಡಿದೆ. ಐಸಿಸ್ ಮುಖವಾಣಿ ‘ದಿ ವಾಯ್ಸ್ ಆಫ್ ಹಿಂದ್’ನಲ್ಲಿ ಈ ಫೋಟೋ ಪ್ರಕಟವಾಗಿದೆ ಎನ್ನಲಾಗಿದ್ದು, 'ಸುಳ್ಳು ದೇವರನ್ನು ನಿವಾರಿಸುವ ಸಮಯ ಬಂದಿದೆ' ಎಂದು ಬರೆಯಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಮುರ್ಡೇಶ್ವರ ಶಿವನಮೂರ್ತಿ ಬಳಿ ಸದ್ಯ ಡಿಆರ್ ತುಕಡಿ, ಪೊಲೀಸ್ ಸಿಬ್ಬಂದಿ, ಎಎಸೈ, ಪಿಎಸೈಗಳನ್ನು ನಿಯೋಜಿಸಲಾಗಿದೆ. ಎಲ್ಲೆಡೆ ಹೆಚ್ಚಿನ ನಿಗಾ ಇಡಲಾಗಿದೆ. ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಟಿವಿ ಅಳವಡಿಸಿ ಚಲನವಲನ ಗಮನಿಸಲಾಗುತ್ತಿದೆ. ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ಬಂದೋಬಸ್‌್ತಗೆ ಬಳಸಿಕೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಮುರ್ಡೇಶ್ವರದಲ್ಲಿ ಸುರಕ್ಷತೆ ಮತ್ತು ಶಿವನಮೂರ್ತಿಯ ಭದ್ರತೆಗೆ ಬೇಕಾದ ಎಲ್ಲ ಅಗತ್ಯ ವ್ಯವಸ್ಥೆ ಮಾಡಿದೆ.