ಪರಪ್ಪನ ಅಗ್ರಹಾರ ಜೈಲಿನಲ್ಲಿ ಖುಲ್ಲಂಖುಲ್ಲವಾಗಿ ಅಕ್ರಮ ನಡೆಯುತ್ತಿರುವ ಬಗ್ಗೆ ಜನವರಿ 25 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಎಡಿಜಿಪಿ ಮುರುಗನ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖೆ ಮುಗಿದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಬೆಂಗಳೂರು (ಜೂ. 16): ಪರಪ್ಪನ ಅಗ್ರಹಾರ ಜೈಲಿನಲ್ಲಿ ಖುಲ್ಲಂಖುಲ್ಲವಾಗಿ ಅಕ್ರಮ ನಡೆಯುತ್ತಿರುವ ಬಗ್ಗೆ ಜನವರಿ 25 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಎಡಿಜಿಪಿ ಮುರುಗನ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿತ್ತು. ತನಿಖೆ ಮುಗಿದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ವರದಿಯಲ್ಲಿ ಸುವರ್ಣ ನ್ಯೂಸ್ ಅಂಶಗಳು ಉಲ್ಲೇಖವಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Central Jail) ಅಕ್ರಮ ಚಟುವಟಿಕೆ ಕುರಿತು ‘ಏಷ್ಯಾನೆಟ್ ಸುವರ್ಣ ನ್ಯೂಸ್’ನಿರಂತರವಾಗಿ ಸುದ್ದಿಪ್ರಸಾರ ಮಾಡಿತ್ತು. ಇಲ್ಲಿನ ಕೈದಿಗಳು ಜೈಲು ಸಿಬ್ಬಂದಿಗೆ ಗರಿಗರಿ ನೋಟುಗಳನ್ನು ಕೊಡುತ್ತಿರುವ ಕೆಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೈದಿಗಳು ನೀಡುವ ಹಣದಾಸೆಗೆ ಜೈಲು ಸಿಬ್ಬಂದಿ ಟೀವಿ, ಫ್ಯಾನ್, ಟೇಬಲ್ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿದ್ದಾರೆ. ಕೈದಿಗಳು ಮದ್ಯ, ಗಾಂಜಾ, ಗುಟ್ಕಾ, ಬೀಡಿ, ಸಿಗರೆಟು, ತಮ್ಮಿಷ್ಟದ ಆಹಾರ ಸೇವಿಸಿಕೊಂಡು ಐಷಾರಾಮಿಯಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು.