Nov 16, 2022, 5:30 PM IST
ವೆಲ್ಲಿಂಗ್ಟನ್(ನ.16): ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ನಲ್ಲೇ ಮುಗ್ಗರಿಸಿ ನಿರಾಸೆ ಅನುಭವಿಸಿದ್ದ ಟೀಂ ಇಂಡಿಯಾ, ಇದೀಗ ನ್ಯೂಜಿಲೆಂಡ್ ಪ್ರವಾಸದಲ್ಲಿ 3 ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ, ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ನವೆಂಬರ್ 18ರಿಂದ ಆರಂಭವಾಗಲಿದೆ. ಈ ಸರಣಿಗೂ ಮುನ್ನ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಹಾರ್ದಿಕ್ ಪಾಂಡ್ಯ, ಟಿ20 ವಿಶ್ವಕಪ್ ಟೂರ್ನಿಯು ನಮಗೆ ನಿರಾಸೆಯನ್ನು ಮೂಡಿಸಿದೆ. ಆದರೆ ನಾವು ವೃತ್ತಿಪರರು. ನಾವು ಮಾಡಿದ ತಪ್ಪನ್ನು ಗುರುತಿಸಿ, ಮತ್ತಷ್ಟ ಬಲಿಷ್ಠ ತಂಡವಾಗಿ ಹೊರಹೊಮ್ಮುತ್ತೇವೆಂದು ಹೇಳಿದ್ದಾರೆ.
2024ರ ಟಿ20 ವಿಶ್ವಕಪ್ ಟೂರ್ನಿಗೆ ರೋಡ್ ಮ್ಯಾಪ್ ರೆಡಿಯಾಗಿದೆ. ಆದರೆ ಸದ್ಯಕ್ಕಂತೂ ನಮ್ಮ ಗಮನ ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್ ಎಂಜಾಯ್ ಮಾಡುವುದಾಗಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.