Nov 17, 2022, 6:06 PM IST
ವೆಲ್ಲಿಂಗ್ಟನ್(ನ.17): ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ಮೊದಲ ಪಂದ್ಯ ನವೆಂಬರ್ 18ರಂದು ಇಲ್ಲಿನ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ. ನಾಯಕ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕರಾಗಿ ಮುನ್ನಡೆಸಲಿದ್ದು, ವಿವಿಎಸ್ ಲಕ್ಷ್ಮಣ್ ಹಂಗಾಗಿ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ವಿವಿಎಸ್ ಲಕ್ಷ್ಮಣ್, ಹಾರ್ದಿಕ್ ಪಾಂಡ್ಯ ಅವರೊಬ್ಬ ಅದ್ಭುತ ನಾಯಕ. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಹೇಗೆ ಮುನ್ನಡೆಸಿದರು ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಫ್ರಾಂಚೈಸಿ ಲೀಗ್ ಟೂರ್ನಿಯಲ್ಲಿ ಮೊದಲ ವರ್ಷದಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವುದು ಸುಲಭವೇನಲ್ಲ ಎಂದು ಲಕ್ಷ್ಮಣ್ ಹೇಳಿದ್ದಾರೆ.
ನಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುತ್ತೇವೆ: ಹಾರ್ದಿಕ್ ಪಾಂಡ್ಯ
ನಾನು ಐರ್ಲೆಂಡ್ ಸರಣಿಯಿಂದೀಚೆಗೆ ಹಾರ್ದಿಕ್ ಪಾಂಡ್ಯ ಜತೆ ಸಾಕಷ್ಟು ಸಮಯ ಕಳೆದಿದ್ದೇನೆ. ಅವರು ತಾಂತ್ರಿಕವಾಗಿ ಮಾತ್ರವಲ್ಲ, ಮೈದಾನದೊಳಗೆ ತಾಳ್ಮೆಯಿಂದ ಇರುವುದನ್ನು ಗಮನಿಸಿದ್ದೇನೆ. ಇದು ಉನ್ನತ ಹಂತದ ಕ್ರಿಕೆಟ್ ಆಡುವಾಗ ತುಂಬಾ ಮುಖ್ಯವಾಗಿರುತ್ತದೆ ಎಂದು ಎನ್‌ಸಿಎ ಮುಖ್ಯಸ್ಥರೂ ಆಗಿರುವ ಲಕ್ಷ್ಮಣ್ ಅಭಿಪ್ರಾಯ ಪಟ್ಟಿದ್ದಾರೆ.