ವರ್ಷಾರಂಭದಲ್ಲಿ ಕಾಟೇರ ಸಕ್ಸಸ್..ವರ್ಷಾಂತ್ಯಕ್ಕೆ ಲೈಫೇ ಬರ್ಬಾದ್: ದಾಸನ 2024 ಫ್ಲ್ಯಾಶ್ ಬ್ಯಾಕ್!

Dec 31, 2024, 4:02 PM IST

ಕಳೆದ ವರ್ಷದ ಕೊನೆಗೆ ದರ್ಶನ್ ನಟನೆಯ ಕಾಟೇರ ಸಿನಿಮಾ ತೆರೆಗೆ ಬಂದಿತ್ತು. ಕನ್ನಡ ಸಿನಿರಂಗದಲ್ಲೇ ಅತಿದೊಡ್ಡ ಯಶಸ್ಸು ಕಂಡ ಕಾಟೇರ ದರ್ಶನ್​ ಪಾಲಿಗೆ ವರ್ಷಾರಂಭದಲ್ಲೇ ಗೆಲುವಿನ ಸಿಹಿಯನ್ನ ನೀಡಿತ್ತು. ಆದ್ರೆ ಖುಷಿಯಿಂದ ವರ್ಷಾರಂಭ ಮಾಡಿದ ದರ್ಶನ್​ಗೆ ಆ ಬಳಿಕ ಬೆನ್ನು ಬಿದ್ದಿದ್ದೆಲ್ಲಾ ಬರೀ ವಿವಾದಗಳೇ. ಅದ್ರಲ್ಲೂ ಕೊಲೆ ಕೇಸ್​​ನಲ್ಲಿ ಜೈಲು ಸೇರಿಬಂದ ದಾಸ ಸದ್ಯ ಬೇಲ್ ಮೇಲೆ ಆಚೆ ಇದ್ದಾನೆ. 2024ರ ಆರಂಭ-ಅಂತ್ಯದ ನಡುವೆ ದರ್ಶನ್ ಬದುಕಲ್ಲಿ ನಡೆದಿದ್ದು ಘೋರ ದುರಂತ. ಯೆಸ್ ಕಳೆದ ವರ್ಷ ಈ ಸಮಯದಲ್ಲಿ ದರ್ಶನ್ ಫುಲ್ ಸಂತಸದ ಮೂಡ್​​ನಲ್ಲಿದ್ರು. ಕ್ರಾಂತಿ ಸಿನಿಮಾ ಸೋಲಿನ ಬಳಿಕ ಕಾಟೇರ ಚಿತ್ರವನ್ನ ಗೆಲ್ಲಿಸಲೇಬೇಕು ಅಂತ ಪಣ ತೊಟ್ಟಿದ್ದ ದರ್ಶನ್ ಮಾಧ್ಯಮಗಳ ಕ್ಷಮೆ ಕೇಳಿ ರಾಜಿ ಮಾಡಿಕೊಂಡಿದ್ರು. ಮಂಡ್ಯದಲ್ಲೊಂದು, ಹುಬ್ಬಳ್ಳಿಯಲ್ಲೊಂದು ಇವೆಂಟ್ ಮಾಡಿ ಭರ್ಜರಿ ಪ್ರಚಾರ ಮಾಡಿದ್ರು. ಸೋ ಡಿಸೆಂಬರ್ 29ಕ್ಕೆ ತೆರೆಗೆ ಬಂದಿದ್ದ ಕಾಟೇರ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. 

ಕಾಟೇರ ಸಿನಿಮಾ ದರ್ಶನ್ ವೃತ್ತಿ ಬದುಕಲ್ಲೇ ಬೆಸ್ಟ್ ಸಿನಿಮಾ ಅಂದ್ರೆ ತಪ್ಪಾಗಲ್ಲ. 1970ರ ದಶಕದ ಗ್ರಾಮೀಣ ಬದುಕಿನ ಈ ಕಥೆಯಲ್ಲಿ ದರ್ಶನ್ ಪ್ರಬುದ್ದವಾಗಿ ನಟಿಸಿದ್ರು. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ಫಸ್ಟ್ ಕ್ಲಾಸ್.. ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಅಪ್ಪಟ ಕನ್ನಡ ಮಣ್ಣಿನ ಈ ಕಥೆ ಗೆದ್ದು ಬೀಗಿತ್ತು. ಕೆಜಿಎಫ್, ಕಾಂತಾರ ಚಿತ್ರಗಳನ್ನ ಬಿಟ್ರೆ ಅತಿಹೆಚ್ಚು  ಬಾಕ್ಸ್ ಆಫೀಸ್ ಗಳಿಕೆ ಮಾಡಿದ ಸಿನಿಮಾ ಕಾಟೇರ. ಕೆಜಿಎಫ್, ಕಾಂತಾರ ಪ್ಯಾನ್ ಇಂಡಿಯಾ ಚಿತ್ರಗಳಾದ್ರೆ ಜಸ್ಟ್ ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾದ ಕಾಟೇರ ಬಾಕ್ಸ್ ಆಫೀಸ್ ಪಂಡಿತರನ್ನೇ ಬೆಚ್ಚಿಬೀಳುವಂತೆ ಕಲೆಕ್ಷನ್ ಮಾಡಿತ್ತು.


ಯೆಸ್ ಕಾಟೇರ ಸಿನಿಮಾ ದೊಡ್ಡ ಸಕ್ಸಸ್ ಕಂಡ ಬೆನ್ನಲ್ಲೇ ಚಿತ್ರತಂಡ ಸಕ್ಸಸ್ ಮೀಟ್ ಅರೇಂಜ್ ಮಾಡಿತ್ತು. ಆವತ್ತು ತಂಡದ ಸದಸ್ಯರ ಜೊತೆಗೆ ಜೆಟ್ ಲ್ಯಾಗ್ ಪಬ್​ನಲ್ಲಿ ಖುಷಿ ಖುಷಿಯಾಗಿ ಪಾರ್ಟಿ ಮಾಡಿದ್ರು ದರ್ಶನ್. ಆದ್ರೆ ಅವಧಿ ಮೀರಿ ಪಾರ್ಟಿ ಮಾಡಿದ್ದವರಿಗೆ ಕೇಸ್ ಜಡಿದು ಬಿಸಿ ಮುಟ್ಟಿಸಿದ್ರು ಪೊಲೀಸರು. ಪೊಲೀಸ್ ಠಾಣೆಗೆ ಬಂದು ಈ ಬಗ್ಗೆ ವಿವರಣೆ ಕೊಡುವಂತೆ ನೋಟೀಸ್ ನೀಡಲಾಗಿತ್ತು. ತನ್ನ ಪಟಾಲಂ ಕಟ್ಟಿಕೊಂಡು ಸುಬ್ರಮಣ್ಯಪುರಂ ಪೊಲೀಸ್ ಠಾಣೆಗೆ ಬಂದಿದ್ರು. ಜನವರಿ ತಿಂಗಳಲ್ಲಿ ಅದ್ಯಾವ್ ಮುಹೂರ್ತದಲ್ಲಿ ಠಾಣೆ ಮೆಟ್ಟಿಲು ಹತ್ತಿದ್ರೋ ಇಡೀ ವರ್ಷ, ಸ್ಟೇಶನ್, ಕೋರ್ಟ್, ಜೈಲು ಅಂತ ಅಲೆಯುವಂತೆ ಆಗಿಬಿಟ್ತು. ದರ್ಶನ್ ಜೊತೆ ಸತೀಶ್, ಚಿಕ್ಕಣ್ಣ, ಅಭಿಷೇಕ್ ಸೇರಿ 8 ಜನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ರು. ಬಳಿಕ ಆ ಪಬ್ ಲೈಸೆನ್ಸ್ 25 ದಿನಗಳ ಕಾಲ ಅಮಾನತ್ತು ಅಗಿತ್ತು. ಹಾಗೂ ಹೀಗೂ ಈ ಕೇಸ್​ ಮುಗಿತು ಅನ್ನೋವಷ್ಟರಲ್ಲಿ ದರ್ಶನ್ ಮತ್ತೊಂದು ವಿವಾದ ಮಾಡಿಕೊಂಡ್ರು.

ಮಂಡ್ಯದಲ್ಲಿ ನಡೆದ ಸಕ್ಸಸ್ ಇವೆಂಟ್​​ನಲ್ಲಿ ಪತ್ನಿ-ಗೆಳತಿ ಬಗ್ಗೆ ಮಾತನಾಡ್ತಾ ಇವತ್ತು ಅವಳಿರ್ತಾಳೆ.. ನಾಳೆ ಇವಳಿರ್ತಾಳೆ ಅಂತ ಕೆಟ್ಟ ಮಾತನಾಡಿ ಮತ್ತೊಂದು ಕೇಸ್ ಜಡಿಸಿಕೊಂಡ್ರು. ಹೆಣ್ಣುಮಕ್ಕಳ ಬಗ್ಗೆ ದರ್ಶನ್ ಆಡಿದ ಕೀಳು ಅಭಿರುಚಿಯ ಈ ಮಾತಿನ ಬಗ್ಗೆ ಮಹಿಳಾ ಆಯೋಗ ಗರಂ ಆಗಿ ದರ್ಶನ್​ಗೆ ನೋಟೀಸ್ ನೀಡಿತ್ತು. ಇನ್ನೂ ಬೆಂಗಳೂರಿನಲ್ಲಿ ನಡೆದ ಕಾಟೇರ ಸಕ್ಸಸ್ ಇವೆಂಟ್​​ನಲ್ಲಿ ದರ್ಶನ್ ನಿರ್ಮಾಪಕ ಉಮಾಪತಿ ಗೌಡಗೆ ತಗಡು ಅಂದಿದ್ದು ಮತ್ತೆ ವಿವಾದ ಸೃಷ್ಟಿಸ್ತು. ಸೋ ಕಾಟೇರ ಯಶಸ್ಸು ದರ್ಶನ್​ನ ವಿನೀತನನ್ನಾಗಿ ಮಾಡಲಿಲ್ಲ. ಬದಲಾಗಿ ಮತ್ತಷ್ಟು ದುರಹಂಕಾರಿಯನ್ನಾಗಿ ಮಾಡಿತ್ತು..

ಇದರ ನಡುವೆ ದರ್ಶನ್ ಸಾಕಿದ ನಾಯಿ ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣ ಕೂಡ ದಾಸನನ್ನ ಸ್ಟೇಷನ್ ಮೆಟ್ಟಿಲು ಹತ್ತುವಂತೆ ಮಾಡಿತ್ತು. 2023ರ ಅಕ್ಟೋಬರ್ 28ರಂದು ವಕೀಲೆ ಅಮಿತಾ ಜಿಂದಾಲ್ ಎಂಬುವವರು ನೀಡಿದ ದೂರಿನ ಅನ್ವಯ ಕೇಸ್ ದಾಖಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ಹಾಜರಾಗಿ ದರ್ಶನ್ ತಮ್ಮ ಹೇಳಿಕೆ ನೀಡಿದ್ರು. ಈ ವರ್ಷ ಜನವರಿ 20ರಂದು ಈ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆ ಆಗಿತ್ತು. ಆದರೆ ಅದರಲ್ಲಿ ದರ್ಶನ್ ಹೆಸರು ಕೈಬಿಡಲಾಗಿತ್ತು. 

ಇಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಆದ್ರೆ ಕಳೆದ ಜೂನ್​ನಲ್ಲಿ ದರ್ಶನ್ ಮರ್ಡರ್ ಕೇಸ್​​ನಲ್ಲಿ ಅರೆಸ್ಟ್ ಆದ್ರು. ಗೆಳತಿ ಪವಿತ್ರಾಗೆ ಅಶ್ಲೀಲ ಮೆಸೆಜ್ ಮಾಡ್ತಿದ್ದ ರೇಣುಕಾಸ್ವಾಮಿಯನ್ನ ಹೆದರಿಸೋಕೆ ಹೋಗಿ ಪ್ರಾಣವನ್ನೇ ತೆಗೆದಿದ್ದ ದರ್ಶನ್, ಈ ಕೇಸ್ ಮುಚ್ಚಿಹಾಕೋಕೆ ಮೂವರನ್ನ ಹಣ ಕೊಟ್ಟು ಸರೆಂಡರ್ ಮಾಡಿಸಿದ್ರು. ಆದ್ರೆ ಖಾಕಿಪಡೆ ಇದರ ಹಿಂದಿನ ಅಸಲೀಯತ್ತನ್ನ ಹೊರತೆಗೆದು ದರ್ಶನ್​ನ ಬಂಧಿಸಿ ಜೈಲಿಗಟ್ಟಿತ್ತು.  ಜೈಲಿಗೆ ಹೋದ ಮೇಲೂ ದರ್ಶನ್ ನೆಟ್ಟಗಾಗಲಿಲ್ಲ. ಪರಪ್ಪನ ಅಗ್ರಹಾರದಲ್ಲಿ ರೌಡಿಗಳ ದೋಸ್ತಿ ಮಾಡಿ ದಂ ಹೊಡ್ಕೊಂಡು ಆರಾಮಾಗಿದ್ದ ದರ್ಶನ್​​ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯ್ತು. ಸದ್ಯ ದರ್ಶನ್​ಗೆ ಬೇಲ್ ಸಿಕ್ಕಿದ್ದು ಮೈಸೂರಿನ ಫಾರ್ಮ್​ಹೌಸ್ ಸೇರಿ ರೆಸ್ಟ್ ಮಾಡ್ತಾ ಇದ್ದಾರೆ. ಈ ವರ್ಷ ಅದೆಷ್ಟು ಸೊಗಸಾಗಿ ಶುರುವಾಗಿತ್ತು.. ಈಗ ನೋಡಿದ್ರೆ ವರ್ಷಾಂತ್ಯ ಎಷ್ಟು ಕೆಟ್ಟದಾಗಿದೆ ಅಂತ ಫ್ಕ್ಯಾಶ್ ಬ್ಯಾಕ್ ಮೆಲುಕು ಹಾಕ್ತಾ ಇದ್ದಾರೆ.