
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ ಎರಡನೇ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಸೀತಾರಾಮನ್ ಅವರು ಸತತ 8ನೇ ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ.
ನವದೆಹಲಿ (ಜ.31): ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ನಾಳೆ ನಿರ್ಮಲಾ ಸೀತಾರಾಮನ್ 8ನೇ ಆಯವ್ಯಯ ಮಂಡನೆ ಮಾಡಲಿದ್ದಾರೆ. ತೆರಿಗೆದಾರರಿಗೆ ಬಿಗ್ ರಿಲೀಫ್ ಸುಳಿವು ಪ್ರಧಾನಿ ಮೋದಿ ಕೊಟ್ಟಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ದುರ್ಬಲಗೊಂಡಿರುವ ಆರ್ಥಿಕ ಬೆಳವಣಿಗೆಗೆ ಬಲ ತುಂಬುವ ಹಾಗೂ ಬೆಲೆ ಏರಿಕೆ ಮತ್ತು ಸ್ಥಿರ ಆದಾಯದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. 2019ರಲ್ಲಿ ಮೋದಿ ಸರ್ಕಾರದ 2ನೇ ಅವಧಿಯಲ್ಲಿ ಪೂರ್ಣಾವಧಿ ವಿತ್ತ ಸಚಿವೆಯಾಗಿ ನೇಮಕಗೊಂಡ ನಿರ್ಮಲಾ ಅವರು ಒಟ್ಟು 7 ಪೂರ್ಣಾವಧಿ ಹಾಗೂ 2024ರ ಫೆಬ್ರವರಿಯಲ್ಲಿ 1 ಮಧ್ಯಂತರ ಬಜೆಟ್ ಮಂಡಿಸಿದ್ದರು. ಇನ್ನು ಕೇವಲ 3 ಬಜೆಟ್ ಮಂಡಿಸಿದರೆ ಒಟ್ಟು 11 ಬಜೆಟ್ ಮಂಡಿಸಿದ ಸಾರ್ವಕಾಲಿಕ ದಾಖಲೆ ಸೃಷ್ಟಿಸಲಿದ್ದಾರೆ.