ಸುಗಂಧ ದ್ರವ್ಯ ಹಾಗೂ ಪಾನ್ ಮಸಾಲಾ ಉದ್ಯಮಿ ಪೀಯೂಷ್ ಜೈನ್ (Piyush Jain) ಮನೆ ಮೇಲೆ ಐಟಿ ದಾಳಿ ಮುಂದುವರೆದಿದ್ದು, ಜಪ್ತಿಯಾದ ನಗದಿನ ಪ್ರಮಾಣ ಭರ್ಜರಿ 194 ಕೋಟಿ ರು.ಗೆ ಏರಿಕೆಯಾಗಿದೆ.
ನವದೆಹಲಿ (ಡಿ. 28): ಸುಗಂಧ ದ್ರವ್ಯ (Perfume) ಹಾಗೂ ಪಾನ್ ಮಸಾಲಾ ಉದ್ಯಮಿ ಪೀಯೂಷ್ ಜೈನ್ (Piyush Jain) ಮನೆ ಮೇಲೆ ಐಟಿ ದಾಳಿ (IT Raid) ಮುಂದುವರೆದಿದ್ದು, ಜಪ್ತಿಯಾದ ನಗದಿನ ಪ್ರಮಾಣ ಭರ್ಜರಿ 194 ಕೋಟಿ ರು.ಗೆ ಏರಿಕೆಯಾಗಿದೆ. ಜಿಎಸ್‌ಟಿ (GST) ವಿಭಾಗದ ಇತಿಹಾಸದಲ್ಲೇ ಇಷ್ಟುಹಣವನ್ನು ಜಪ್ತು ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಇಷ್ಟಲ್ಲದೇ 250 ಕೇಜಿ ಬೆಳ್ಳಿ, 25 ಕೇಜಿ ಚಿನ್ನ ಕೂಡ ಜಪ್ತಿ ಆಗಿದೆ. ಈತನ ಒಟ್ಟು 4 ಮನೆಗಳಲ್ಲಿನ 300 ಕೀಲಿಕೈ ಹಾಗೂ 9 ಡ್ರಂಗಳಲ್ಲಿನ ಗಂಧದ ಸುಗಂಧದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಕೆಲವು ಕಪಾಟು ಬಾಗಿಲು ತೆಗೆಯಲು ಆಗಿಲ್ಲ ಎಂದು ತಿಳಿದುಬಂದಿದೆ.
ಈವರೆಗಿನ ಮಾಹಿತಿ ಪ್ರಕಾರ, ಈತನ ಕಾನ್ಪುರ ಮನೆಯಲ್ಲಿ 177 ಕೋಟಿ ರು. ಹಾಗೂ ಕನೌಜ್ ಮನೆಯಲ್ಲಿ 17 ಕೋಟಿ ರು. ನಗದು ಜಪ್ತಿ ಮಾಡಲಾಗಿದೆ. ಹಣದ ಎಣಿಕೆ ಇನ್ನೂ ಮುಂದುವರಿದಿದ್ದು, ನಗದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹಣ ಎಣಿಸಲು 19 ಎಣಿಕೆ ಯಂತ್ರ ಬಳಸಲಾಗುತ್ತಿದೆ. 50 ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ.