ಪತ್ನಿಯಾದವಳು ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವಳಾದರೆ ಏನಾಗುತ್ತದೆ? ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯಳನ್ನು ನೋಡಿ ಅಂತಿದ್ದಾರೆ ನೆಟ್ಟಿಗರು.
ಒಂದು ಸಂಸಾರ ಸರಿದೂಗಿಕೊಂಡು ಹೋಗಬೇಕೆಂದರೆ ಗಂಡು ಮತ್ತು ಹೆಣ್ಣು ಇಬ್ಬರೂ ಸಮನಾಗಿ ಇರಬೇಕು ಎನ್ನುವ ಮಾತಿದೆ. ಆದರೆ ವಾಸ್ತವದಲ್ಲಿ ಹೀಗೆ ಆಗುವುದು ಕಮ್ಮಿನೇ. ಸಂಸಾರದಲ್ಲಿ ಏನೇ ಎಡವಟ್ಟು ಆದರೂ ಅದಕ್ಕೆ ಹೆಣ್ಣನ್ನೇ ಹೊಣೆ ಮಾಡುವ ಹಲವು ಮನೆಗಳೇ ಇವೆ. ಅದು ಎಷ್ಟರಮಟ್ಟಿಗೆ ಎಂದರೆ ಗಂಡನಾದವ ದಾರಿ ತಪ್ಪಿದರೂ, ಇನ್ನೊಂದು ಹೆಣ್ಣಿನ ಸಂಬಂಧ ಮಾಡಿದರೂ, ಅಕ್ರಮ ಎಸಗಿದರೂ ಅದಕ್ಕೆ ಹೆಂಡ್ತಿನೇ ಕಾರಣ ಎಂದು ಆಕೆಯ ಮೇಲೆ ಗೂಬೆ ಕೂರಿಸುವುದಂತೂ ತಪ್ಪಿಲ್ಲ. ಗಂಡನನ್ನು ಅಸಡ್ಡೆ ಮಾಡಿದರೆ, ಹೆಚ್ಚು ಹಣಕ್ಕೆ ಆಸೆ ಪಟ್ಟು ಗಂಡ ಅಡ್ಡ ಹಾದಿ ಹಿಡಿಯುವಂತೆ ಮಾಡುವಲ್ಲಿ ಕೆಲವೊಮ್ಮೆ ಹೆಂಡತಿಯ ಪಾತ್ರ ಇರುವುದು ನಿಜವಾದರೂ ಎಲ್ಲಾ ಸಂದರ್ಭಗಳಲ್ಲಿಯೂ ಹೆಣ್ಣನ್ನೇ ದೂಷಿಸುವುದು ಸರಿಯಲ್ಲ. ಆದರೆ, ಗಂಡ ಮಾಡುವ ತಪ್ಪುಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಸದಾ ಆತನಿಗೆ ಸಪೋರ್ಟ್ ಮಾಡುತ್ತಾ, ಆತನ ತಪ್ಪನ್ನೆಲ್ಲಾ ಮನೆಯವರ ಎದುರಿಗೆ ಬರದಂತೆ ಮಾಡಲು ಶ್ರಮಿಸುತ್ತಾ ಅತಿ ಒಳ್ಳೆತನ ಪ್ರದರ್ಶಿಸಲು ಹೋದರೂ ಕೊನೆಗೊಂದು ದಿನ ಅದಕ್ಕೆ ಸಂಪೂರ್ಣ ಜವಾಬ್ದಾರಿ ಆಗುವುದು ಹೆಂಡತಿಯೇ ಎನ್ನುವ ಸತ್ಯದ ದರ್ಶನ ಮಾಡಿಸಿದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್.
ಹೆಣ್ಣನ್ನು ಕ್ಷಮಯಾಧರಿತ್ರಿಗೆ ಹೋಲಿಸುತ್ತಾರೆ. ಸಹನೆಯ ಪ್ರತಿರೂಪ ಎಂದೂ ಬಣ್ಣಿಸುತ್ತಾರೆ. ಎಲ್ಲವೂ ನಿಜನೇ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಹೆಣ್ಣು ಅಗತ್ಯಕ್ಕಿಂತ ಹೆಚ್ಚಿಗೆ ಒಳ್ಳೆಯವಳಾಗುತ್ತಾ ಸಾಗಿದರೆ ಏನಾಗುತ್ತದೆ ಎಂಬುದನ್ನು ತೋರಿಸಿದರೆ ಇವತ್ತಿನ ಭಾಗ್ಯಲಕ್ಷ್ಮಿ ಪ್ರೊಮೋ. ಪತಿ ಹಾದಿ ತಪ್ಪಿದರೂ ಆತನ ತಪ್ಪುಗಳನ್ನು ಕ್ಷಮಿಸುತ್ತಾ, ಅವನ ಇನ್ನೊಂದು ಮುಖವನ್ನು ಆತನ ಪಾಲಕರಿಗೆ ತಿಳಿಯದಂತೆ ಪತಿಯನ್ನು ಕಾಪಾಡುತ್ತಾ ಬಂದ ಭಾಗ್ಯ ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾಳೆ. ಗಂಡ ಏನೇ ತಪ್ಪು ಮಾಡಿದರೂ ಆತನನ್ನು ಕ್ಷಮಿಸುತ್ತಾ ಬಂದಿರುವ ಭಾಗ್ಯ ಈಗ ಅತ್ತೆಯ ದೃಷ್ಟಿಯಲ್ಲಿ ವಿಲನ್ ಆಗಿದ್ದಾಳೆ. ನೀನು ಸರಿಯಿದ್ದು ಗಂಡ ಮಕ್ಕಳನ್ನು ಸರಿಯಾಗಿ ನೋಡಿಕೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ ಎನ್ನುವ ಅತ್ತೆಯ ಚುಚ್ಚು ಮಾತನ್ನು ಭಾಗ್ಯ ಕೇಳಬೇಕಾಗಿ ಬಂದಿದೆ!
ಸ್ತ್ರೀವಾದ ಎನ್ನುವ ಹುಚ್ಚಾಟ ಬಿಟ್ಟು ಕೆಲಸದತ್ತ ಗಮನ ಕೊಡಿ: ಗಂಡು-ಹೆಣ್ಣು ಸಮಾನರಲ್ಲ; ನಟಿ ನೀನಾ ಗುಪ್ತಾ
ಬೇರೊಬ್ಬಳ ಹಿಂದೆ ಹೋಗಿರುವ ತಾಂಡವ್ನ ವಿಷಯದಲ್ಲಿ ಮನೆಯಲ್ಲಿ ದೊಡ್ಡ ಜಗಳವಾಗಿದೆ. ಮಾತಿನ ಮಧ್ಯೆ ತಾಂಡವ್ ಪತ್ನಿ ಭಾಗ್ಯಳ ಕೆನ್ನೆಗೆ ಹೊಡೆದಾಗ ಸಿಟ್ಟಿನಿಂದ ತಾಯಿ ಕುಸುಮಾ ಮಗನ ಕೈಗೆ ಬರೆ ಹಾಕಿದ್ದಾಳೆ. ಇದೇ ಕೋಪದಿಂದ ತಾಂಡವ್ ಮನೆಬಿಟ್ಟು ಹೋಗಿದ್ದಾನೆ. ಪತಿ ಸಿಟ್ಟಿನಿಂದ ಮನೆ ಬಿಟ್ಟು ಹೋಗಿದ್ದು, ಅದೂ ಕಾರಿನಲ್ಲಿ ಹೋಗಿರುವುದಕ್ಕೆ ಭಾಗ್ಯಳಿಗೆ ಕಸಿವಿಸಿ ಶುರುವಾಗಿದೆ. ಎಷ್ಟೆಂದರೂ ಗಂಡನಲ್ಲವೆ? ಅಲ್ಲಿಯವರೆಗೂ ಗಂಡನ ತಪ್ಪನ್ನು ಕ್ಷಮಿಸುತ್ತಾ ಬಂದಿರುವ ಭಾಗ್ಯಳ ಗಮನ ಎಲ್ಲೋ ಹೋಗಿದೆ. ಅಡುಗೆ ಮನೆಯಲ್ಲಿ ದೋಸೆ ಸೀದು ಹೋಗಿದೆ. ಇದರಿಂದ ಅತ್ತೆ ಕುಸುಮಾಳಿಗೆ ಇನ್ನಿಲ್ಲದ ಕೋಪ ಬಂದಿದೆ.
ಅಡುಗೆ ಮನೆಗೆ ಬಂದು ಸೊಸೆಯನ್ನು ಸಿಕ್ಕಾಪಟ್ಟೆ ಬೈದಿದ್ದಾಳೆ. ಗಮನ ಎಲ್ಲೋ ಇಟ್ಟು ಅಡುಗೆ ಮಾಡಬೇಡ ಎಂದು ಬುದ್ಧಿ ಹೇಳಿದ್ದಾಳೆ. ಗಂಡನ ವಿಷಯ ಹೇಳಿದ್ದಕ್ಕೆ ಇನ್ನಷ್ಟು ಕೋಪಗೊಂಡು ಆಕೆಯನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಹೋಗಿ, ನಿನ್ನಿಂದಲೇ ಈ ಸ್ಥಿತಿ ಬಂದಿರುವುದಾಗಿ ಹೇಳಿದ್ದಾಳೆ. ಅಪ್ಪ-ಅಮ್ಮ, ಹೆಂಡತಿ-ಮಕ್ಕಳು ಯಾರೂ ಬೇಡ ಎಂದು ಬೆನ್ನು ತಿರುಗಿಸಿ ಹೋಗಿರುವವನ ಬಗ್ಗೆ ಚಿಂತೆ ಮಾಡಬೇಡ ಎಂದು ಸೊಸೆಯನ್ನು ಗದರಿರುವ ಅತ್ತೆ ಕುಸುಮಾ, ಎಲ್ಲದ್ದಕ್ಕೂ ಸೊಸೆಯನ್ನೇ ಕಾರಣವಾಗಿಸಿದ್ದಾಳೆ. ಇದರಿಂದ ನೆಟ್ಟಿಗರು ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರು ಗರಂ ಆಗಿದ್ದಾರೆ. ಥಹರೇವಾರಿ ಕಮೆಂಟ್ ಹಾಕುತ್ತಿದ್ದಾರೆ. ಇದರಲ್ಲಿ ಕುಸುಮಳ ತಪ್ಪೇನು ಎನ್ನುತ್ತಿದ್ದಾರೆ. ಗಂಡ ದಾರಿ ತಪ್ಪಿದರೂ ಅದಕ್ಕೆ ಹೆಂಡ್ತಿನೇ ಕಾರಣನಾ ಎಂದು ಕೆಲವರು ಕೇಳುತ್ತಿದ್ದರೆ, ಅದಕ್ಕೇ ಹೇಳುವುದು ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬಾರದು ಎಂದು ಹೇಳುತ್ತಿದ್ದಾರೆ.
ನಟನೆ ನನ್ನ ಉಸಿರು, ಕೃಷಿ ನನ್ನ ಕನಸು: ಹೆತ್ತವರೊಂದಿಗೆ ತೋಟದಲ್ಲಿ ನಟಿ ಶ್ರುತಿ ಕೃಷ್ಣ