ಎಲ್ಲ ಕಡೆ ವಿಜೃಂಭಣೆಯಿಂದ ವರಮಹಾಲಕ್ಷ್ಮೀ ಹಬ್ಬದ ಸೆಲೆಬ್ರೇಶನ್ ನಡೆದರೆ ಗಟ್ಟಿಮೇಳ ಸೀರಿಯಲ್‌ನಲ್ಲಿ ಮಾತ್ರ ಹಬ್ಬದ ಆಚರಣೆ ವಿಭಿನ್ನವಾಗಿ ನಡೆಯುತ್ತಿದೆ. ಇಲ್ಲೀವರೆಗೆ ವಿಲನ್ ಆಗಿದ್ದ ಸುಹಾಸಿನಿ ದಿಢೀರ್ ಆಗಿ ಬದಲಾಗಿದ್ದಾಳೆ. ಒಳ್ಳೆಯ ಬದಲಾವಣೆಯ ಮೂಲಕ ಹಬ್ಬವನ್ನು ಆಚರಿಸುತ್ತಿದ್ದಾಳೆ.
ವರಮಹಾಲಕ್ಷ್ಮೀ ಹಬ್ಬ ಎಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದೆ. ಕನ್ನಡ ಸೀರಿಯಲ್‌ಗಳೂ ಇದಕ್ಕೆ ಹೊರತಾಗಿಲ್ಲ. 'ಗಟ್ಟಿಮೇಳ' ಸೀರಿಯಲ್ ನಲ್ಲಿ ವಿಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತಿದೆ. ಈ ಸೀರಿಯಲ್ ಮೊದಲಿಂದಲೂ ಹೊಸ ಬದಲಾವಣೆಗೆ ಮೌಲ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಾ ಇದೆ. ಇದೀಗ ಹಬ್ಬದ ನೆವದಲ್ಲಿ ಹಬ್ಬವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಹೊರಟಿದೆ. ಮನೆಯನ್ನು ಮನೆಯವರೆಲ್ಲ ಸೇರಿ ಸಿಂಗಾರ ಮಾಡಿದ್ದಾರೆ. ಈ ವೇಳೆ ಮನೆಗೊಬ್ಬರು ಸ್ಪೆಶಲ್ ಗೆಸ್ಟ್ ಬರ್ತಿದ್ದಾರೆ, ಅವರ ಜೊತೆಗೆ ಹಬ್ಬ ಸೆಲೆಬ್ರೇಟ್ ಮಾಡೋಣ ಎಂಬ ಮಾತನ್ನು ಸುಹಾಸಿನಿ ಹೇಳುತ್ತಾಳೆ. ಸಾಮಾನ್ಯವಾಗಿ ಹಬ್ಬದ ಸಮಯ ಸ್ಪೆಶಲ್ ಗೆಸ್ಟ್ ಅಂದರೆ ಯಾರೋ ಸೆಲೆಬ್ರಿಟಿಗಳೇ ಆಗಿರ್ತಾರೆ. ಹೀಗಾಗಿ ಈ ಹಬ್ಬಕ್ಕೂ ಯಾರೋ ಸೆಲೆಬ್ರಿಟಿ ಬರಬಹುದು ಅನ್ನೋ ನಿರೀಕ್ಷೆಯಲ್ಲಿ ಈ ಸೀರಿಯಲ್‌ನ ವೀಕ್ಷಕರಿದ್ದರು. ಆದರೆ ಸ್ಪೆಶಲ್ ಗೆಸ್ಟ್ ಆಗಿ ಬಂದವರು ಅಮೂಲ್ಯ ಅಮ್ಮ ಪರಿಮಳಾ. ತನ್ನ ಸೊಸೆಯ ತಾಯಿಯನ್ನೇ ಹಬ್ಬಕ್ಕೆ ಸ್ಪೆಶಲ್ ಗೆಸ್ಟ್ ಆಗಿ ಕರೆಸಿ ಅವರಿಂದ ಪೂಜೆ ಮಾಡಿಸುವ ಸುಹಾಸಿನಿ ನಿರ್ಧಾರ ಅಮೂಲ್ಯಗೆ ಮಾತ್ರ ಅಲ್ಲ, ಮನೆಯವರೆಲ್ಲರಿಗೂ ಅಚ್ಚರಿ, ಖುಷಿ ಎರಡನ್ನೂ ತಂದಿದೆ.
ಹಾಗೆ ನೋಡಿದರೆ ಸುಹಾಸಿನಿಯದು ನೆಗೆಟಿವ್ ಶೇಡ್‌ನ ಪಾತ್ರ. ಅಮೂಲ್ಯ ಮತ್ತು ವೇದಾಂತ್ ಬದುಕಲ್ಲಿ ಬಿರುಗಾಳಿ ತರಲು ಅವಳು ಸದಾ ಪ್ರಯತ್ನ ಮಾಡುತ್ತಲೇ ಇರುತ್ತಾಳೆ. ಅಮೂಲ್ಯಳನ್ನು ಕಂಡರಾಗದ ಅವಳು ಸೊಸೆಯ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತಾಳೆ. ಆದರೆ ಅಮೂಲ್ಯಗೆ ಅತ್ತೆಯ ಈ ಬುದ್ಧಿ ಬಗ್ಗೆ ಸಿಟ್ಟಿದೆ. ಆದರೆ ಅವಳು ಇತರ ಸೀರಿಯಲ್ ನಾಯಕಿಯರಂತೆ ಕೆಟ್ಟ ಅತ್ತೆ ಹೇಳಿದಂತೆ ಕೇಳುವ ಅತೀ ಒಳ್ಳೆಯ ಸೊಸೆಯಲ್ಲ. ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ತಿರುಗಿಸಿ ಹೇಳುವಷ್ಟು ಜಾಣೆ, ಬುದ್ಧಿವಂತೆ. ಈ ಕಾಲದ ಹೆಣ್ಮಗಳು. ಹೀಗಾಗಿಯೇ ಈ ಸೀರಿಯಲ್‌ನ ಅಮೂಲ್ಯ ಪಾತ್ರ ಎಲ್ಲರ ಮನಗೆದ್ದಿದೆ ಅಂತಲೇ ಹೇಳಬಹುದು. ಜೊತೆಗೆ ಅಮೂಲ್ಯ-ವೇದಾಂತ್ ಈ ಕಾಲದ ಗಂಡ ಹೆಂಡತಿ. ಸದಾ ಕಾಲೆಳೆಯುತ್ತಾ, ಮುದ್ದು ಮಾಡುತ್ತಾ, ತರಲೆ ಮಾತುಗಳಿಂದ ಫುಲ್ ಎಂಟರ್‌ಟೈನ್‌ಮೆಂಟ್ ನೀಡ್ತಾ ಬಂದಿರುವ ಜೋಡಿಯಿದು. ಈ ಜೋಡಿಯನ್ನೂ ಜನ ಇಷ್ಟಪಟ್ಟಿದ್ದಾರೆ. ಇದೀಗ ಐಶ್ವರ್ಯ ದೇವತೆ ವರಮಹಾಲಕ್ಷ್ಮಿಗೆ ಹೃದಯ ಶ್ರೀಮಂತಿಕೆಯ ಪರಿಮಳಾ ಮೂಲಕ ಪೂಜೆ ಸಲ್ಲಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬದ ಆಚರಣೆಯನ್ನು ಸೀರಿಯಲ್ ಟೀಮ್ ಕಟ್ಟಿಕೊಟ್ಟಿದೆ.
Lakshana serial: ಮೌರ್ಯ ಜೊತೆ ಶ್ವೇತಾ ಮದುವೆ ನಡೆಯುತ್ತಾ? ಇನ್ನೊಂದು ಟ್ವಿಸ್ಟ್!
ಈ ಹಿಂದೆ ಭೀಮನ ಅಮಾವಾಸ್ಯೆ ಆಚರಣೆಯನ್ನೂ ಈ ಸೀರಿಯಲ್‌ನಲ್ಲಿ ತರಲಾಗಿತ್ತು. ಭೀಮನ ಅಮಾವಾಸ್ಯೆ ಅಂದರೆ ಪತಿಯ ಪಾದ ಪೂಜೆ ಅಂತಿದ್ದ ಹಳೆಯ ಕಾಲದ ಆಚರಣೆಯನ್ನು ಬಿಟ್ಟು ಅದು ಗಂಡನ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಹೆಣ್ಮಕ್ಕಳ ಹಬ್ಬವೂ ಹೌದು, ಅವಳಿಗೂ ಪೂಜೆ ಮಾಡಬೇಕು, ಅವಳಿಗೂ ಆಯುಸ್ಸು, ಆರೋಗ್ಯವನ್ನು ಗಂಡ ದೇವರ ಬಳಿ ಬೇಡಿಕೊಳ್ಳಬೇಕು ಎಂಬರ್ಥದಲ್ಲಿ ಆಚರಿಸಲಾಗಿತ್ತು. ವೇದಾಂತ್ ಹಾಗೂ ವಿಕ್ರಾಂತ್ ಈ ಹಬ್ಬದಲ್ಲಿ ತಮ್ಮ ಪತ್ನಿಯರನ್ನು ಪೀಠದಲ್ಲಿ ಕೂರಿಸಿ ಅವರಿಗೆ ಅರಶಿನ ಕುಂಕುಮ ಹಚ್ಚಿ, ಸೀರೆ ನೀಡಿ, ಪತ್ನಿಗೆ ದೇವರು ಆಯುಷ್ಯ, ಆರೋಗ್ಯ, ನೆಮ್ಮದಿ ದಯಪಾಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವ ಥರ ಕಥೆ ಇತ್ತು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವೀಕ್ಷಕರಿಂದ ಹರಿದು ಬಂದಿತ್ತು. ಈ ಸೀರಿಯಲ್ ತಂಡದವರು ನಿಜ ಅರ್ಥದಲ್ಲಿ ಹಬ್ಬದ ಆಚರಣೆ ಮಾಡಿದ್ದಾರೆ ಎಂಬರ್ಥದ ಪ್ರತಿಕ್ರಿಯೆಗಳನ್ನು ಜನ ನೀಡಿದ್ದರು.
ನಮ್ಮ ಭಾರತೀಯ ಸಂಪ್ರದಾಯಗಳ ವಿಶಿಷ್ಟ ಗುಣ ಅಂದರೆ ಕಾಲಕ್ಕೆ ತಕ್ಕಂತೆ ಬದಲಾಗೋದು, ಜನರ ಜೀವನಕ್ಕೆ ಹತ್ತಿರವಾಗುತ್ತಾ ಹೋಗುವುದು. ಹೀಗಾಗಿಯೇ ಈ ಹಬ್ಬಗಳಿನ್ನೂ ಕೇವಲ ಆಚರಣೆಗಳಾಗಿಯಷ್ಟೇ ಉಳಿಯದೇ ನಮ್ಮ ಮನಸ್ಸಿಗೂ ಹತ್ತಿರವಾಗಿವೆ. ಖುಷಿಯನ್ನು ಹೆಚ್ಚಿಸುವ ಹಾಗೆ ನಡೆದುಕೊಂಡು ಬಂದಿವೆ.
ಟಾಪ್‌ಲೆಸ್ ಫೋಸ್ ನೀಡಿದ ಉರ್ಫಿ, ಎದೆ ಮುಚ್ಚಿಕೊಂಡಿದ್ದು ಕೂದಲಿನಿಂದ!