ಆಭರಣದ ಜಾಹೀರಾತಿನಲ್ಲಿ ನಾಯಕಿಯಾದ ತೃತೀಯ ಲಿಂಗಿ! ಜನರ ಪ್ರತಿಕ್ರಿಯೆ ಹೇಗಿತ್ತು?

By Bhavani BhatFirst Published Sep 7, 2021, 3:57 PM IST
Highlights

ಕೆಲವು ತಿಂಗಳ ಹಿಂದೆ ಪ್ರಸಿದ್ಧ ಜ್ಯುವೆಲ್ಲರಿಯೊಂದು ತೃತೀಯ ಲಿಂಗಿಯನ್ನು ನಾಯಕಿಯಾಗಿಸಿ ಜಾಹೀರಾತು ಹೊರಬಿಟ್ಟಿತು. ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಅದು ಒಂದು ನಿಮಿಷ 40 ಸೆಕೆಂಡಿನ ಜಾಹೀರಾತು. ಇದನ್ನು ನೋಡ್ತಿದ್ರೆ ಆಡ್‌ಗಿಂತಲೂ ಹೆಚ್ಚಾಗಿ ಒಳ್ಳೆ ಶಾರ್ಟ್ ಮೂವಿ ನೋಡಿದ ಥರ ಫೀಲ್‌ ಬರುತ್ತೆ. ಆರಂಭದ ಭಾಗದಲ್ಲಿ ಗಡ್ಡ, ಮೀಸೆ ಇರುವ ಹುಡುಗನ ಅಸಹಜ ವರ್ತನೆ ಶುರುವಿನಲ್ಲಿ ಸ್ವಲ್ಪ ಮುಜುಗರ ತರಿಸುವ ಹಾಗಿರುತ್ತೆ. ರೂಮಿನಲ್ಲಿ ಒಂಟಿಯಾಗಿ ಕೂತು ಏನು ಮಾಡಲೂ ತೋಚದೇ ಆತ ಬಹಳ ಕಷ್ಟದಿಂದ ದಿನ ದೂಡುತ್ತಿರುತ್ತಾನೆ. ಎಲ್ಲರೆದುರು ಕಾಣಿಸಿಕೊಳ್ಳಲು ಅಂಜುವ, ಸದಾ ಒಂಟಿತನದಿಂದ ನರಳುವ ಆತನ ಸ್ಥಿತಿ, ಮನಸ್ಥಿತಿ ಡಿಪ್ರೆಸ್ಸಿವ್ ಅನಿಸುವ ಹಾಗಿರುತ್ತೆ. ಆದರೆ ಆ ತೃತೀಯ ಲಿಂಗಿಯ ತಂದೆ ಆ ಹುಡುಗನಲ್ಲಿ ತುಂಬುವ ಧೈರ್ಯ ಅವನಲ್ಲಿ ಹೇಗೆ ಬದಲಾವಣೆ ತಂದಿತು, ಆತ್ಮವಿಶ್ವಾಸವನ್ನು ಬೆಳೆಸುತ್ತಾ ಹೋಯಿತು ಅನ್ನೋದನ್ನು ಈ ಜಾಹೀರಾತು ಹೇಳುತ್ತೆ. ತಾನು ಗೆಜ್ಜೆ ಕಟ್ಟಿ ಬೀಚ್‌ನಲ್ಲಿ ಓಡಾಡಬೇಕು, ಅಮ್ಮನಿಂದ ಉದ್ದ ಕೂದಲು ಬಾಚಿಸಿಕೊಳ್ಳಬೇಕು, ಆಭರಣ ತೊಟ್ಟು ಹೆಣ್ಣಿನಂತೆ ನಡೆದುಕೊಳ್ಳಬೇಕು ಎಂಬೆಲ್ಲ ಆಸೆಯನ್ನು ಆಕೆಯ ತಂದೆ ಹೇಗೆ ಈಡೇರಿಸಿದರು ಅನ್ನೋದನ್ನು ಈ ಜಾಹೀರಾತು ಹೇಳುತ್ತೆ. ಕೊನೆಯಲ್ಲಿ ಆಕೆ ಆಕೆ ಚೆಂದದ ಮದುಮಗಳಾಗಿ ಕಾಣಿಸಿಕೊಂಡು, ಆತ್ಮವಿಶ್ವಾಸದಿಂದ ಮುಗುಳ್ನಗುವಲ್ಲಿ ಜಾಹೀರಾತು ಕೊನೆಯಾಗುತ್ತದೆ. 

ನಮ್ಮ ಪಾರಂಪರಿಕ ಆಭರಣಗಳಿಗೆ ಹೆಸರುವಾಸಿಯಾದ ಭೀಮಾ ಜ್ಯುವೆಲ್ಲರಿಯ ಜಾಹೀರಾತಿದು. ಈ ಆಡ್‌ ಬಂದು ನಾಲ್ಕು ತಿಂಗಳುಗಳಾಗಿವೆ. ಇದೀಗ ಬಿಬಿಸಿ ಇಂಡಿಯಾ ಈ ಬಗ್ಗೆ ಲೇಖನವನ್ನು ಪ್ರಕಟಿಸಿ ಮೆಚ್ಚುಗೆ ಸೂಚಿಸಿದೆ. ಈ ಜಾಹೀರಾತಿನ ನಾಯಕಿಯಾಗಿ ಮಿಂಚಿರುವ ಟ್ರಾನ್ಸ್ ಜೆಂಡರ್‌ ಹೆಸರು ಮೀರಾ ಸಿಂಘಾನಿಯಾ ರೆಹಾನಿ. ಈಕೆ ಬಿ ಎ ಪದವೀಧರೆ, ತೃತೀಯ ಲಿಂಗಿ. ಮಾಡೆಲಿಂಗ್ ಜೊತೆಗೆ ಎಲ್‌ಜಿಬಿಟಿ ಸಮುದಾಯದ ಹೋರಾಟಗಳಲ್ಲಿ ತೊಡಗಿಸಿಕೊಂಡಾಕೆ. ತನ್ನ ಕುಡುಕ ತಂದೆಯಿಂದಲೇ 'ಚಕ್ಕ' ಎಂದು ಕರೆಸಿಕೊಂಡು ನೊಂದಾಕೆ. 

ಆದರೆ ಸಹೋದರಿಯ ಬೆಂಬಲದಿಂದ ಈ ಮಟ್ಟಿಗೆ ಬೆಳೆದು ನಿಲ್ಲಲು ಸಾಧ್ಯವಾಗಿದೆ. 'ನನ್ನ ಮೊದಲ ಬಾಯ್ ಫ್ರೆಂಡ್ ಬೆಂಗಳೂರಿನವನು. ಇಲ್ಲಿ ನಾನು ದೈಹಿಕ ಸಂಬಂಧ ಹೊಂದಿರುವ ಹಲವು ಜನರಿದ್ದಾರೆ. ನನಗೆ ನನ್ನ ಸೆಕ್ಸುವಲ್ ಐಡೆಂಟಿಟಿ ಬಗ್ಗೆ ಹೆಮ್ಮೆ ಇದೆ, ಸಂತೋಷವಿದೆ. ಆದರೂ ನನ್ನ ಲಿಂಗ ಪರಿವರ್ತನೆಯ ಕಾರಣಕ್ಕೆ ಈಗಲೂ ಸಾಕಷ್ಟು ನೋವು ತಿನ್ನುತ್ತಿದ್ದೇನೆ' ಎನ್ನುತ್ತಾರೆ ಮೀರಾ. 'ಈ ಜಾಹೀರಾತು ಮಾಡುವಾಗ ನನಗೂ ಡೌಟಿತ್ತು. ನನ್ನ ಐಡೆಂಟಿಟಿಯನ್ನು ಕಮರ್ಷಿಯಲ್ ಲಾಭಕ್ಕೆ ಬಳಸೋದರ ಬಗ್ಗೆಯೂ ಗೊಂದಲ ಇತ್ತು. ಈ ಬಗ್ಗೆ ಜನ ಏನಂದುಕೊಳ್ಳುತ್ತಾರೋ ಅಂತ ಭಯ ಬೇರೆ. ಶುರುವಲ್ಲಿ ಗಡ್ಡ ಮೀಸೆ ಬಿಡಬೇಕು ಅಂದಾಗ ಒಂಥರಾ ಅನಿಸುತ್ತಿತ್ತು. ಯಾವಾಗ ನಿರ್ದೇಶಕರು ನನ್ನ ಜೊತೆಗೆ ಮಾತಾಡಿದ್ರೋ ಆಗ ಸಂದೇಹ, ಆತಂಕದ ಜಾಗದಲ್ಲಿ ಆತ್ಮವಿಶ್ವಾಸ ತುಂಬಿತ್ತು. ಶೂಟಿಂಗ್ ನಲ್ಲೆಲ್ಲ ಬಹಳ ಕಂಫರ್ಟೇಬಲ್ ಫೀಲ್ ಇತ್ತು' ಅಂತಾರೆ. 

ಮೇಘನಾ ರಾಜ್ ಪುತ್ರನಿಗೆ ಹೆಸರು ಸೂಚಿಸಿದ್ದು ಯಾರು?

ಮತ್ತೊಂದು ಖುಷಿಯ ಸಂಗತಿ ಅಂದರೆ ಮೀರಾ ನಟಿಸಿರುವ ಜಾಹೀರಾತಿಗೆ ಎಲ್ಲೆಡೆಯಿಂದ ಪಾಸಿಟಿವ್‌ ರೆಸ್ಪಾನ್ ಬರುತ್ತಿದೆ. ಈ ಜಾಹೀರಾತು ಮಾಡುವ ಹೊತ್ತಿಗೆ ಕಂಪೆನಿಯವರಿಗೆ ಬಹಳ ಹಿಂಜರಿಕೆ ಇತ್ತಂತೆ. 'ಎಲ್ಲಿ ನಾವು ಗ್ರಾಹಕರ ಕೆಂಗಣ್ಣಿಗೆ ತುತ್ತಾಗುತ್ತೇವೋ, ಇದರಿಂದ ಗ್ರಾಹಕರನ್ನು ಕಳೆದುಕೊಳ್ಳುತ್ತೇವೋ ಅನ್ನುವ ಆತಂಕ ಇದ್ದೇ ಇತ್ತು. 'ನಮ್ಮ ಹೆಚ್ಚಿನ ಜ್ಯುವೆಲ್ಲರಿ ಶಾಪ್ ಗಳಿರೋದು ಗ್ರಾಮೀಣ ಭಾಗದಲ್ಲಿ. ಅಲ್ಲಿಯ ಜನ ಇದನ್ನು ಹೇಗೆ ಸ್ವೀಕರಿಸುತ್ತಾರೋ ಅಂತ ಟೆನ್ಶನ್ ಆಗಿದ್ದೆವು' ಅಂತ ಕಂಪೆನಿಯ ಆನ್ ಲೈನ್ ವಿಭಾಗದ ಮುಖ್ಯಸ್ಥೆ ನವ್ಯಾ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಏಕೆಂದರೆ ಇಶ್ಯೂ ಬೇಸ್ಡ್ ಜಾಹೀರಾತಿನ ಮೂಲಕ ಈ ಹಿಂದೆ ಕಾನಿಷ್ಕ್ ಜ್ಯುವೆಲ್ಲರಿ ಒಂದಿಷ್ಟು ಜನರ ಕೆಂಗಣ್ಣಿಗೆ ತುತ್ತಾಗಿತ್ತು. ಆದರೆ ಈ ಜಾಹೀರಾತು ಒಂದು ಸೋಷಿಯಲ್ ಮೆಸೇಜ್ ಆಗಿದ್ದರ ಬಗ್ಗೆ ಅವರಿಗೆ ಈಗ ಹೆಮ್ಮೆ ಇದೆ. 

ಸೋಷಿಯಲ್ ಮೀಡಿಯಾಗಳಲ್ಲೆಲ್ಲ ಈ ಜಾಹೀರಾತಿನ ಬಗ್ಗೆ ಪಾಸಿಟಿವ್ ಪ್ರತಿಕ್ರಿಯೆಗಳು ಹರಿದಾಡುತ್ತಿವೆ. ಜಗತ್ತಿನಾದ್ಯಂತ ಈ ವಿಶಿಷ್ಟ ಪ್ರಯೋಗದ ಬಗ್ಗೆ ಮೆಚ್ಚುಗೆ ಹರಿದು ಬಂದಿದೆ. 

ಸಿದ್ಧಾರ್ಥ್ ಶುಕ್ಲಾ ನಿಧನದ ಬೆನ್ನಲೇ ಆಸ್ಪತ್ರೆಗೆ ದಾಖಲಾಗದ ಬಿಗ್ ಬಾಸ್ ಜಸ್ಲೀನ್

click me!