Beard Balaka: ಬಿಯರ್ಡ್ ಬಾಲಕ ವಿಡಿಯೋ ನೋಡಿ ಆಸ್ಪತ್ರೆಯಲ್ಲಿ ನಕ್ಕ ಮಗು, ಅಮ್ಮನ ಮೆಸೇಜ್‌ಗೆ ಗಣೇಶ್ ಕಾರಂತ್ ಭಾವುಕ

By Roopa HegdeFirst Published Aug 28, 2024, 1:49 PM IST
Highlights

ಯುಟ್ಯೂಬರ್ ಗಣೇಶ್ ಕಾರಂತ್ ಅವರ 'ಬಿಯರ್ಡ್ ಬಾಲಕ' ವಿಡಿಯೋಗಳು ಆಸ್ಪತ್ರೆಯಲ್ಲಿರುವ ಅಭಿಮಾನಿ ಬಾಲಕನಿಗೆ ನಗುವನ್ನು ತಂದುಕೊಟ್ಟಿದೆ. ಈ ಮೂಲಕ ಜೀವನದಲ್ಲಿ ಸಾರ್ಥಕತೆ ಅನುಭವಿಸಿದ ಗಣೇಶ್, ಅಭಿಮಾನಿಯ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿ (Fans ) ಗಳು ದೇವರು ಎಂಬ ಅಣ್ಣಾವ್ರ ಮಾತು ನೂರಕ್ಕೆ ನೂರು ಸತ್ಯ. ನಮ್ಮ ನಟನೆ, ವಿಡಿಯೋ, ಹಾಡು ಅಥವಾ ಕಲೆಯನ್ನು ನೋಡಿ ಮೆಚ್ಚಿಕೊಳ್ಳುವ ಅಭಿಮಾನಿಗಳು ಅದ್ರ ಬಗ್ಗೆ ಒಂದಿಷ್ಟು ಒಳ್ಳೆ ಕಮೆಂಟ್ ಮಾಡಿದಾಗ ಸಿಗುವ ನೆಮ್ಮದಿ ಅಷ್ಟಿಷ್ಟಲ್ಲ. ನಗಿಸುವ ಕೆಲಸ ಸುಲಭದ್ದಲ್ಲ. ಲಕ್ಷಾಂತರ ಜನರು ನಿಮ್ಮ ವಿಡಿಯೋ (video) ನೋಡಿ ನಗ್ಬೇಕು ಎಂದಾಗ ಅದ್ರ ಹಿಂದಿನ ಪರಿಶ್ರಮ ಸಾಕಷ್ಟಿರುತ್ತದೆ. ಅದ್ರಲ್ಲೂ ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿದ್ದ ಮಗು, ನೋವಿನ ಮಧ್ಯೆಯೂ ನಿಮ್ಮ ವಿಡಿಯೋ ನೋಡಿ ನಗುತ್ತೆ ಅಂದ್ರೆ ಜೀವನ ಸಾರ್ಥಕವಾದಂತೆ. ಅದನ್ನು ಬಹುಮುಖ ಪ್ರತಿಭೆ ಯುಟ್ಯೂಬರ್ ಗಣೇಶ್ ಕಾರಂತ್ (YouTuber Ganesh Karanth)  ಮಾಡಿ ತೋರಿಸಿದ್ದಾರೆ.

ಬಹುಮುಖ ಪ್ರತಿಭೆ (multi talented) ಗಣೇಶ್ ಕಾರಂತ್, ಜೋಡಿ ನಂಬರ್ 1 ಸೀಸನ್ 2ರ ಮೂಲಕ ಕರ್ನಾಟಕದ ಜನತೆಗೆ ಮತ್ತಷ್ಟು ಹತ್ತಿರವಾದವರು. ಅವರು ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಮೊದಲು ಕಿರುತೆರೆ ಮೇಲೆ ಕಾಣಿಸಿಕೊಂಡಿದ್ದರು. ವೃತ್ತಿಯಲ್ಲಿ ಇಂಜಿನಿಯರ್ ಆದ್ರೂ ಗಾಯನ, ನಟನೆಯಲ್ಲಿ ಗಣೇಶ್ ಕಾರಂತ್ ಮುಂದಿದ್ದಾರೆ. ಗಣೇಶ್ ಕಾರಂತ್ ಹೆಸರಿನ ಯುಟ್ಯೂಬ್ ಚಾನೆಲ್ ಇದೆ. ಅದ್ರಲ್ಲಿ ಅವರ ಪತ್ನಿ ಶ್ರೀವಿದ್ಯಾ, ಅಮ್ಮ ಕಾಣಿಸಿಕೊಳ್ತಿರುತ್ತಾರೆ. ಗಣೇಶ್ ಕಾರಂತರ ಇಲ್ಲಿಯೇ ಬಿಯರ್ಡ್ ಬಾಲಕ (beard balaka )ಹೆಸರಿನ ವಿಡಿಯೋಗಳನ್ನು ಹಾಕ್ತಾರೆ. ಇಲ್ಲಿ ಗಣೇಶ್ ತಾವೇ ಅಪ್ಪನಾಗಿ, ತಾವೇ ಮಗನಾಗಿ ಕಾಣಿಸಿಕೊಳ್ತಾರೆ. ಜನಾರ್ಧನ್ ಹಾಗೂ ಬಿಯರ್ಡ್ ಬಾಲಕನ ಸಂಭಾಷಣೆ ಹೊಂದಿರುವ ಈ ಚಾನೆಲ್ ವೀಕ್ಷಕರನ್ನು ನಕ್ಕು ನಲಿಸುವಂತಹ ಚಾನೆಲ್ ಗಳಲ್ಲಿ ಒಂದಾಗಿದೆ. 

Latest Videos

ಪುಟ್ಟ ಮಕ್ಕಳನ್ನು ಈ ಬಿಯರ್ಡ್ ಬಾಲಕ ಸೆಳೆದಿದ್ದಾನೆ. ಇದ್ರಲ್ಲಿ ಅಪ್ಪ ಹಾಗೂ ಮಗನ ಸಂಭಾಷಣೆ ಪುಟಾಣಿಗಳಿಗೆ ಇಷ್ಟವಾಗುತ್ತದೆ. ಎಲ್ಲಿ ಹೋದ್ರೂ ನನ್ನನ್ನು ಬಿಯರ್ಡ್ ಬಾಲಕನಂತೆ ಮಕ್ಕಳು ಗುರುತಿಸ್ತಾರೆ ಎಂದು ಈ ಹಿಂದೆ ಗಣೇಶ್ ಹೇಳಿದ್ದರು.  ಸದ್ಯ ಗಣೇಶ್ ಕಾರಂತ್, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಅಪಘಾತಕ್ಕೊಳಗಾದ ಬಾಲಕನ ಪಾಲಕರು, ಗಣೇಶ್ ಅವರಿಗೆ ಬರೆದ ಪೋಸ್ಟ್ ನೋಡ್ಬಹುದು. 

ಇನ್ಸ್ಟಾಗ್ರಾಮ್ (Instagram) ನಲ್ಲಿ ನನಗೆ ಈ ಸಂದೇಶ ಬಂದಿದೆ. ಇದನ್ನು ಓದಿ ನಾನು ಭಾವುಕನಾದೆ. ಜೀವನ ಸಾರ್ಥಕವೆನಿಸುತ್ತದೆ. ನಮಗೆ ಇನ್ನೇನು ಬೇಕು? ಧನ್ಯವಾದಗಳು ಎಂದು ಶೀರ್ಷಿಕೆ ಹಾಕಿ, ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದಾರೆ ಗಣೇಶ್ ಕಾರಂತ್.

ಆ ಸ್ಕ್ರೀನ್ ಶಾಟ್ ನಲ್ಲಿ, ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲೋದಿಲ್ಲ. ಬಿಯರ್ಡ್ ಬಾಲಕ ನಮ್ಮ ಜೀವನದಲ್ಲಿ ದೊಡ್ಡ ಚಮತ್ಕಾರ ಮಾಡಿದೆ. ನಮ್ಮ ಮಗನಿಗೆ ಆಕ್ಸಿಡೆಂಟ್ ಆಗಿತ್ತು. ಅವನು ಐಸಿಯುವಿನಲ್ಲಿ ಇದ್ದ. ಅವನಿಗೆ ಬಿಯರ್ಡ್ ಬಾಲಕ ತುಂಬಾ ಇಷ್ಟ. ಅವನು ವಾರ್ಡ್ ಗೆ ಶಿಫ್ಟ್ ಆಗ್ತಾ ಇದ್ದಂತೆ ಬಿಯರ್ಡ್ ಬಾಲಕ ವಿಡಿಯೋ ತೋರಿಸಿದೆ. ಅವ ನಕ್ಕ. ಹೋದ ಜೀವ ವಾಪಸ್ ಬಂದ ಹಾಗೆ ಆಯ್ತು. ಥ್ಯಾಂಕ್ಯೂ ಬ್ರೋ ಎಂದು ಬರೆಯಲಾಗಿದೆ.

ಗಣೇಶ್ ಕಾರಂತರ ಈ ಪೋಸ್ಟ್ ಗೆ ವೀಕ್ಷಕರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಬಿಯರ್ಡ್ ಬಾಲಕ ಯುಟ್ಯೂಬ್ ಗೆ ಇನ್ನಷ್ಟು ವಿಡಿಯೋ ಪೋಸ್ಟ್ ಮಾಡುವಂತೆ ಅನೇಕರು ಬೇಡಿಕೆ ಇಟ್ಟಿದ್ದಾರೆ. ಆಸ್ಪತ್ರೆಯಲ್ಲಿರುವ ಬಾಲಕನನ್ನು ಒಮ್ಮೆ ಭೇಟಿಯಾಗಿ ಬನ್ನಿ, ಬಾಲಕನ ಜೊತೆ ಮಾತನಾಡಿದ್ರೆ ಅವನು ಮತ್ತಷ್ಟು ಚೇತರಿಸಿಕೊಳ್ಳಬಹುದು ಎಂದು ಬಳಕೆದಾರರು ಸಲಹೆ ನೀಡಿದ್ದಾರೆ. ಕಂಟೆಂಟ್ ಕ್ರಿಯೇಟರ್ಸ್ ಗೆ ಇಂಥ ಖುಷಿ, ನೆಮ್ಮದಿ, ಸಾರ್ಥಕತೆ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಅನೇಕ ಬಳಕೆದಾರರು ಗಣೇಶ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

click me!