ತಾಂಡವ್ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಭಾಗ್ಯ ಶಾಕ್ ಆಗಿದ್ದಾಳೆ. ಭಾಗ್ಯಳಿಗೆ ಧೈರ್ಯ ತುಂಬ್ತಿರೋ ಫ್ಯಾನ್ಸ್ ಹೇಳ್ತಿರೋದೇನು?
ಭಾಗ್ಯ ನೀನು ಹೆದರಿಕೊಳ್ಳಬೇಡಮ್ಮಾ... ಗಂಡನೇ ಸರ್ವಸ್ವ ಅನ್ನೋ ಅಹಂನಿಂದ ಮೆರೆಯುತ್ತಿರುವ ಗಂಡಸರಿಗೆ ನೀನು ಮಾದರಿಯಾಗು ಭಾಗ್ಯ... ಹೆಣ್ಣಿಗೆ ಗಂಡು ಮುಖ್ಯವಲ್ಲ, ಗಂಡನಿಗೆ ಕಟ್ಟಿಕೊಂಡವಳೇ ಮುಖ್ಯ ಎನ್ನುವುದನ್ನು ತೋರಿಸು... ನೀನು ಎಲ್ಲರಿಗೂ ಮಾದರಿ... ಧೈರ್ಯಗೆಡುತ್ತೀ ಏಕೆ? ನೀನು ಧೈರ್ಯಗೆಟ್ಟರೆ ನಿನ್ನಂತೆ ಬದುಕುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳಿಗೆ ನೋವಾಗುತ್ತದೆ, ನಿನ್ನ ಜೊತೆ ನಾನಿದ್ದೇವೆ... ವಿಚ್ಛೇದನ ಕೊಡಲು ಮುಂದೆ ಬಂದ ಗಂಡನಿಗೆ ತಕ್ಕಶಾಸ್ತಿ ಕಲ್ಸು. ಅವನ ಮುಂದೆ ಮಂಡಿಯೂರಬೇಡ... ನಿನ್ನಲ್ಲಿ ಬದುಕುವ ಛಲವಿದೆ... ಕಟ್ಟಿಕೊಂಡವಳು ಬಿಟ್ಟು ಇನ್ನಾವಳೋ ಹಿಂದೆ ಹೋಗುವ ಗಂಡಿಗೆ ಬುದ್ಧಿ ಕಲಿಸು... ಹೆಣ್ಣಾದವಳನ್ನು ಕಡೆಗಣ್ಣಿನಿಂದ ನೋಡುವ ಪುರುಷರಿಗೆ ಬುದ್ಧಿ ಕಲಿಸಿ ಮಾದರಿಯಾಗು...
ಹೀಗೆ ಹತ್ತು-ಹಲವು ಕಮೆಂಟ್ಗಳ ಸುರಿಮಳೆಯಾಗುತ್ತಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್ ಪ್ರೊಮೋಗೆ. ಶ್ರೇಷ್ಠಾಳ ಹಿಂದೆ ಬಿದ್ದಿರೋ ತಾಂಡವ್, ಪತ್ನಿ ಭಾಗ್ಯಲಕ್ಷ್ಮಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಭಾಗ್ಯಳಿಗೆ ಇದು ಇಲ್ಲಿಯವರೆಗೆ ತಿಳಿಯದ ವಿಷಯವಾಗಿತ್ತು. ಆದರೆ ಈ ಬಗ್ಗೆ ಇದಾಗಲೇ ತಾಂಡವ್ ಅಮ್ಮ ಕುಸುಮಾಗೂ ಗೊತ್ತಾಗಿತ್ತು. ಆದರೆ ಭಾಗ್ಯ ಇದನ್ನು ಸಹಿಸುವವಳಲ್ಲ ಎಂದು ಯಾರಿಗೂ ಹೇಳದೇ ಸುಮ್ಮನಿದ್ದಳು. ಭಾಗ್ಯಳ ಮಾವನಿಗೂ ವಿಷಯ ತಿಳಿದಿದ್ದರೂ ಅದನ್ನು ಹೇಳಿರಲಿಲ್ಲ. ಶ್ರೇಷ್ಠಾಳ ಕುತಂತ್ರದಿಂದ ತಾಂಡವ್ ಡಿವೋರ್ಸ್ ಪತ್ರ ಕಳುಹಿಸಿದ್ದಾನೆ. ಅದು ಮಾವನ ಕೈಸೇರಿತ್ತು. ಮಗ ಸೊಸೆಗೆ ವಿಚ್ಛೇದನ ಕೊಡುತ್ತಿರುವ ಸುದ್ದಿ ಕೇಳಿ ಆತನಿಗೆ ಶಾಕ್ ಆಗಿದೆ. ಅದೇ ಶಾಕ್ನಲ್ಲಿಯೇ ಮೂರ್ಚೆ ತಪ್ಪಿ ಬಿದ್ದು ಆಸ್ಪತ್ರೆ ಸೇರಿದ್ದ. ಆದರೆ ಇದೀಗ ಈ ಗುಟ್ಟು ರಟ್ಟಾಗಿದೆ. ಭಾಗ್ಯಳಿಗೂ ವಿಷಯ ಗೊತ್ತಾಗಿದೆ.
ಹೇರ್ಸ್ಟೈಲ್ ಕುರಿತು ಕುತೂಹಲದ ಮಾಹಿತಿ ಹೇಳಿದ ಮೈಕೆಲ್! ಬಿಗ್ಬಾಸ್ ಸ್ಪರ್ಧಿಗಳ ಜೊತೆ ಪಾರ್ಟಿ ಮೂಡ್..
ಮನೆಯವರೆಲ್ಲರೂ ಕುಳಿತು ಡಿವೋರ್ಸ್ ವಿಷ್ಯ ಮಾತನಾಡುತ್ತಿರುವಾಗ ಭಾಗ್ಯ ಅದನ್ನು ಕೇಳಿಸಿಕೊಂಡಿದ್ದಾಳೆ. ತಾಂಡವ್ ಅಮ್ಮ ಮತ್ತು ಅಪ್ಪನ ಬಳಿ ಇದರ ವಿಷಯ ಮಾತನಾಡುತ್ತಿರುವಾಗ ಭಾಗ್ಯಳಿಗೆ ತಾಂಡವ್ ತನಗೆ ಡಿವೋರ್ಸ್ ಕೊಡುತ್ತಿರುವ ವಿಷಯ ತಿಳಿದಿದೆ. ಇದನ್ನು ಕೇಳಿ ಅವಳಿಗೆ ನಿಂತ ನೆಲವೇ ಕುಸಿದ ಅನುಭವ. ಮಾವನ ಬಾಯಲ್ಲಿ ವಿಚ್ಛೇದನದ ಶಬ್ದ ಕೇಳುತ್ತಲೇ ಈ ಹಿಂದೆ ಭಾಗ್ಯ ಕಂಗಾಲಾಗಿ ಹೋಗಿದ್ದಳು. ಹೀಗೆಲ್ಲಾ ಮತ್ತೊಮ್ಮೆ ಹೇಳಬೇಡಿ. ನಮ್ಮದು 16 ವರ್ಷದ ಸಂಸಾರ. ಅವರು ಬಿಟ್ಟು ಹೋದರೆ ಗತಿಯೇನು? ಮಕ್ಕಳು ಅಪ್ಪನಿಲ್ಲದೇ ಬೆಳೆಯಬೇಕಾ ಎಂದೆಲ್ಲಾ ಬಿಕ್ಕಿಬಿಕ್ಕಿ ಅತ್ತಿದ್ದಳು. ಮನೆಯರಿಗೆ ಆಕೆಯನ್ನು ಹೇಗೆ ಸಮಾಧಾನ ಮಾಡಬೇಕು ಎಂದು ತಿಳಿದಿರಲಿಲ್ಲ. ಆದರೆ ಈಗ ವಿಷಯ ತಿಳಿದಿದೆ.
ಭಾಗ್ಯಳನ್ನು ನೋಡಿ ಅತ್ತೆ ಕುಸುಮ ಹೆದರಿಬಿಟ್ಟಿದ್ದಾಳೆ. ಏನೋ ಮಾತಿನ ಭರದಲ್ಲಿ ಸಿಟ್ಟಿನಿಂದ ತಾಂಡವ್ ಹಾಗೆ ಮಾತನಾಡುತ್ತಿದ್ದಾನೆ. ನೀನು ಹೆದರಬೇಡ ಎಂದು ಸೊಸೆಯನ್ನು ಸಮಾಧಾನ ಮಾಡಿದ್ದ ಕುಸುಮಾ, ಇದೆಲ್ಲಾ ಸುಳ್ಳು ಎಂದು ಹೇಳು ಎಂದು ಮಗನಿಗೆ ಹೇಳಿದ್ದಾಳೆ. ಆಗ ತಾಂಡವ್, ಭಾಗ್ಯಳ ಕೈಹಿಡಿದು ಇದೆಲ್ಲಾ ನಿಜ. ನಾನು ಡಿವೋರ್ಸ್ ಕೊಡುತ್ತಿದ್ದೇನೆ. ನನ್ನ-ನಿನ್ನ ಸಂಬಂಧ ಮುಗಿಯಿತು. ಇಬ್ಬರಿಗೂ ಆಗಿ ಬರುವುದಿಲ್ಲ ಎಂದಿದ್ದಾನೆ. ಭಾಗ್ಯ ಕಲ್ಲಾಗಿ ಹೋಗಿದ್ದಾಳೆ. ಅವಳಿಗೆ ಮುಂದಿನ ದಾರಿ ತಿಳಿಯದಾಗಿದೆ. ಮದುವೆಯೆಂಬುದು ಪವಿತ್ರ ಬಂಧ ಎಂದುಕೊಂಡಿರೋ ಭಾಗ್ಯಳ ಕಣ್ಣಿಗೆ ಕತ್ತಲು ಕವಿದಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಹಲವರು ಭಾಗ್ಯಳನ್ನು ಸಂತೈಸುತ್ತಿದ್ದಾರೆ. ಇದೊಂದು ಧಾರಾವಾಹಿಯಾದರೂ ನಿಜ ಜೀವನದ ಅದೆಷ್ಟೋ ಮಹಿಳೆಯರಿಗೆ ಕುಸುಮಾ ಮತ್ತು ಭಾಗ್ಯ ಮಾದರಿ ಎಂದು ಇದಾಗಲೇ ಹಲವರು ಹೇಳಿದ್ದುಂಟು. ಮುಂದೇನಾಗುತ್ತದೋ ಕಾದು ನೋಡಬೇಕಿದೆ.
ಸ್ಯಾಂಡಲ್ವುಡ್ ನಟಿಯಾಗುವ ಆಸೆ ಇದ್ಯಾ? ನಿಮ್ಮೂರಲ್ಲೇ ಆಡಿಷನ್ ಶುರು...ಇಲ್ಲಿದೆ ಫುಲ್ ಡಿಟೇಲ್ಸ್