
ಬೆಂಗಳೂರು (ಜ.15): ಬಿಗ್ ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿರುವ ಅಶ್ವಿನಿ ಗೌಡ ಅವರನ್ನು ಕರವೇ ಬೆಂಬಲಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿ.ಎ. ನಾರಾಯಣಗೌಡ, "ಸೋಶಿಯಲ್ ಮೀಡಿಯಾ ಪಾತಕಿಗಳನ್ನು ಕಾನೂನಿನ ಮೂಲಕ ಹೇಗೆ ರಿಪೇರಿ ಮಾಡಬೇಕೆಂದು ನಮಗೆ ಚೆನ್ನಾಗಿ ಗೊತ್ತು" ಎಂದು ಗುಡುಗಿದ್ದಾರೆ.
"ಅಶ್ವಿನಿ ಗೌಡ ಕೇವಲ ಒಬ್ಬ ಬಿಗ್ ಬಾಸ್ ಸ್ಪರ್ಧಿಯಲ್ಲ, ಕಳೆದ 20 ವರ್ಷಗಳಿಂದ ಕನ್ನಡ ನಾಡು, ನುಡಿಗಾಗಿ ಬೀದಿಯಲ್ಲಿ ನಿಂತು ಹೋರಾಟ ಮಾಡಿದ ಹೆಣ್ಣುಮಗಳು. ಕನ್ನಡದ ಪರ ಹೋರಾಡಿ ಹತ್ತಾರು ಕೇಸುಗಳನ್ನು ಮೈಮೇಲೆ ಎಳೆದುಕೊಂಡು ಕೋರ್ಟ್ ಮೆಟ್ಟಿಲು ಹತ್ತಿದವರು. ಒಬ್ಬ ಕನ್ನಡದ ಹೋರಾಟಗಾರ ಬಿಗ್ ಬಾಸ್ ಮನೆಗೆ ಹೋದಾಗ ಅವರನ್ನು ಬೆಂಬಲಿಸುವುದು ಕರವೇ ಧರ್ಮ. ಇಲ್ಲಿ ಜಾತಿ ಅಥವಾ ಧರ್ಮದ ಲೆಕ್ಕಾಚಾರವಿಲ್ಲ, ಕೇವಲ ಕನ್ನಡದ ಲೆಕ್ಕಾಚಾರ ಮಾತ್ರ ಇದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕೈಯಲ್ಲಿ ಮೊಬೈಲ್ ಇದೆ ಎಂದು ಯಾರ ಬಗ್ಗೆ ಬೇಕಾದರೂ ಇಲ್ಲಸಲ್ಲದ ಪೋಸ್ಟರ್ ಹಾಕುವವರನ್ನು ನಾರಾಯಣಗೌಡರು 'ಸೋಶಿಯಲ್ ಮೀಡಿಯಾ ಭಯೋತ್ಪಾದಕರು' ಎಂದು ಕರೆದಿದ್ದಾರೆ. "ಇಂತಹ ಪಾತಕಿಗಳನ್ನು ಕಾನೂನಿನ ಅಡಿಯಲ್ಲಿ ಸರಿಯಾಗಿ ರಿಪೇರಿ ಮಾಡದಿದ್ದರೆ ಒಳ್ಳೆಯವರು ಸಮಾಜದಲ್ಲಿ ಬದುಕುವುದೇ ಕಷ್ಟವಾಗುತ್ತದೆ. ನಮ್ಮ ಕಾನೂನು ಘಟಕದ ಹತ್ತಾರು ವಕೀಲರು ಈಗಾಗಲೇ ಎಲ್ಲರ ಪೋಸ್ಟ್‌ಗಳನ್ನು ಗಮನಿಸುತ್ತಿದ್ದಾರೆ. ಯಾರಿಗೆ ಯಾವ ರೀತಿ ಬುದ್ಧಿ ಕಲಿಸಬೇಕೋ ಅದನ್ನು ಮಾಡೇ ಮಾಡುತ್ತೇವೆ" ಎಂದು ಎಚ್ಚರಿಸಿದ್ದಾರೆ.
"ಕನ್ನಡಕ್ಕಾಗಿ ಹತ್ತು ದಿನ ಜೈಲಿಗೆ ಹೋಗುವ ಯೋಗ್ಯತೆ ಇಲ್ಲದವರು ನಮಗೆ ಉಪದೇಶ ಮಾಡಲು ಬರುತ್ತಿದ್ದಾರೆ. ಬ್ಲಾಕ್‌ಮೇಲ್ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಸೋಶಿಯಲ್ ಮೀಡಿಯಾ ಬಳಸುವವರಿಗೆ ಕರವೇ ಕಾರ್ಯಕರ್ತರ ಬದುಕಿನ ಬಗ್ಗೆ ಮಾತನಾಡುವ ಹಕ್ಕಿಲ್ಲ. ಕರವೇ ಕಾರ್ಯಕರ್ತರಿಗೆ ಗೌರವಾನ್ವಿತ ಉದ್ಯೋಗ ಮತ್ತು ಸಿದ್ಧಾಂತವಿದೆ. ನೀವು ಗಡಿಯಲ್ಲೇನೂ ಯುದ್ಧ ಮಾಡಿ ಬಂದಿಲ್ಲ, ಇದೊಂದು ಕೇವಲ ಮನರಂಜನಾ ಕಾರ್ಯಕ್ರಮವಷ್ಟೇ ಎಂಬುದನ್ನು ನೆನಪಿಡಿ" ಎಂದು ಟೀಕಾಕಾರರ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿರುವ ಗೌಡರು, "ಕರ್ನಾಟಕದ 31 ಜಿಲ್ಲೆಗಳಲ್ಲೂ ಕರವೇ ಕಾರ್ಯಕರ್ತರು ಕೇಸು ದಾಖಲಿಸಿದರೆ, ಹತ್ತಾರು ವರ್ಷ ಕೋರ್ಟ್ ಅಲೆಯಬೇಕಾಗುತ್ತದೆ. ಸಾಧುಗೆ ಸಾಧು, ಅಸಾಧುಗೆ ಅಸಾಧು ಎಂಬುದು ನಮಗೆ ಗೊತ್ತು. ಅಂತಹ ಪರಿಸ್ಥಿತಿ ತಂದುಕೊಳ್ಳಬೇಡಿ" ಎಂದು ಎಚ್ಚರಿಕೆ ನೀಡುವ ಮೂಲಕ ಮಾತು ಮುಗಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.