ಕನ್ನಡ ಕಿರುತೆರೆಯ ಮುದ್ದಾದ ತಾರಾ ಜೋಡಿ ನಟಿ ಐಶ್ವರ್ಯ ಹಾಗೂ ನಟ ವಿನಯ್ ದಂಪತಿ, ತಮ್ಮ ಮುದ್ದು ಅವಳಿ ಮಕ್ಕಳೊಂದಿಗೆ ನಟ, ನಿರೂಪಕ ಸೃಜನ್ ಲೋಕೇಶ್ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಸೃಜನ್ ಲೋಕೇಶ್ ಅವರು ಪುಟ್ಟ ಕಂದಮ್ಮಗಳಿಗೆ ಪ್ರೀತಿಯಿಂದ ಆರತಿ ಬೆಳಗಿ, ಎತ್ತಿ ಮುದ್ದಾಡಿ ಆಶೀರ್ವದಿಸಿದ್ದಾರೆ. ಈ ಅಪರೂಪದ ಹಾಗೂ ಸುಂದರ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ನಟಿ ಐಶ್ವರ್ಯ ತಮ್ಮ ಇನ್‌ಸ್ಟಾ ಪೇಜ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗುತ್ತಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ಈ ದಂಪತಿ, ಮಕ್ಕಳಿಗೆ 'ವಜ್ರ' ಹಾಗೂ 'ವೈಢೂರ್ಯ' ಎಂದು ವಿಶಿಷ್ಟವಾಗಿ ನಾಮಕರಣ ಮಾಡಿದ್ದರು. ಇದೀಗ ತಮ್ಮ ಈ ಪುಟ್ಟ ಕಂದಮ್ಮಗಳನ್ನು ಕರೆದುಕೊಂಡು ಸೃಜನ್ ಲೋಕೇಶ್ ಅವರ ಮನೆಗೆ ತೆರಳಿದ್ದರು. ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಸೃಜನ್, ಆರತಿ ಮಾಡಿ ಹರಸಿದ್ದಾರೆ.
ಈ ಸುಂದರ ಕ್ಷಣದ ವಿಡಿಯೋ ಹಂಚಿಕೊಂಡಿರುವ ನಟಿ ಐಶ್ವರ್ಯ, ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ. "ನನ್ನ ಮುದ್ದು ಮಕ್ಕಳನ್ನು ನಿಮ್ಮ ಮನೆಗೆ ಇಷ್ಟೊಂದು ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ತುಂಬಾ ಧನ್ಯವಾದಗಳು ಸರ್. ನಿಮ್ಮನ್ನು ನನ್ನ ಮಕ್ಕಳು ಭೇಟಿಯಾದ ಮೊದಲ ಕ್ಷಣವಿದು, ಇದು ನಮಗೆ ಎಂದಿಗೂ ವಿಶೇಷವಾದ ದಿನ" ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಈ ಫೋಟೋಗಳನ್ನು ಕಂಡು ಅಭಿಮಾನಿಗಳು ಹಾರ್ಟ್ ಇಮೋಜಿ ಹಾಕಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನಟಿ ಐಶ್ವರ್ಯ ಅವರು 'ಅಗ್ನಿಸಾಕ್ಷಿ', 'ರಾಮಾಚಾರಿ', 'ಸೇವಂತಿ' ಸೇರಿದಂತೆ ಹಲವು ಹಿಟ್ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಮನೆಮಾತಾಗಿದ್ದಾರೆ. ಇತ್ತ ನಟ ವಿನಯ್ ಅವರು 'ಅಣ್ಣ ತಂಗಿ', 'ಮಹಾನದಿ', 'ಮಹಾದೇವಿ' ಹಾಗೂ ತಮಿಳಿನ 'ಲಕ್ಷ್ಮೀ ಸ್ಟೋರ್ಸ್' ಸೇರಿದಂತೆ ಹಲವು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಸೃಜನ್ ಲೋಕೇಶ್ ತೀರ್ಪುಗಾರರಾಗಿದ್ದ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲೂ ಈ ಜೋಡಿ ಸ್ಪರ್ಧಿಗಳಾಗಿ ಭಾಗವಹಿಸಿ ಅಪಾರ ವೀಕ್ಷಕರ ಪ್ರೀತಿ ಗಳಿಸಿತ್ತು.
ಅಂದಿನಿಂದಲೂ ಸೃಜನ್ ಲೋಕೇಶ್ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿರುವ ಐಶ್ವರ್ಯ-ವಿನಯ್ ದಂಪತಿ, ತಮ್ಮ ಮುದ್ದು ಮಕ್ಕಳಾದ ವಜ್ರ ಮತ್ತು ವೈಡೂರ್ಯರನ್ನು ಸೃಜನ್ ಮನೆಗೆ ಕರೆದೊಯ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಕಲರ್ಸ್ ಕನ್ನಡದ ಜನಪ್ರಿಯ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ಸೃಜನ್ ಲೋಕೇಶ್ ಅವರು ತೀರ್ಪುಗಾರರಾಗಿದ್ದರು. ಆ ಶೋನಲ್ಲಿದ್ದಾಗ ಸೃಜನ್ ಅವರು ಐಶ್ವರ್ಯ ಮತ್ತು ವಿನಯ್ ದಂಪತಿಯನ್ನು ತಮ್ಮ ಸ್ವಂತ ಕುಟುಂಬದ ಸದಸ್ಯರಂತೆ, ಕಿರಿಯ ಒಡಹುಟ್ಟಿದವರಂತೆ ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರು. ಆ ಆತ್ಮೀಯತೆಯೇ ಇಂದಿಗೂ ಮುಂದುವರಿದಿದೆ.
ಸೃಜನ್ ಲೋಕೇಶ್ ಮತ್ತು ಅವರ ಪತ್ನಿ ಗ್ರೀಷ್ಮಾ ಲೋಕೇಶ್ ಹಾಗೂ ಅಮ್ಮ ಗಿರಿಜಾ ಲೋಕೇಶ್ ಅವರು ಚಿತ್ರರಂಗ ಹಾಗೂ ಕಿರುತೆರೆಯ ಕಲಾವಿದರಿಗೆ ಸದಾ ಬೆಂಬಲವಾಗಿ ನಿಲ್ಲುವವರು. ಇದೀಗ ಮನೆಗೆ ಬಂದ ಮುದ್ದು ಕಂದಮ್ಮಗಳನ್ನು ಸಾಂಪ್ರದಾಯಿಕವಾಗಿ ಆರತಿ ಬೆಳಗಿ, ಉಡುಗೊರೆ ನೀಡಿ ಆಶೀರ್ವದಿಸಿರುವ ಅವರ ಸರಳತೆ ಮತ್ತು ದೊಡ್ಡಗುಣಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ.
ಐಶ್ವರ್ಯ 'ರಾಮಾಚಾರಿ' ಧಾರಾವಾಹಿಯಲ್ಲಿ ಅಪೂರ್ವಾ ಪಾತ್ರದ ಅತ್ತಿಗೆಯಾಗಿ ನಟಿಸುತ್ತಿರುವಾಗಲೇ ಗರ್ಭಧಾರಣೆಯ ಕಾರಣದಿಂದ ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮಕ್ಕಳು ಸ್ವಲ್ಪ ದೊಡ್ಡವರಾದ ಮೇಲೆ ಅವರು ಮತ್ತೆ ಕಿರುತೆರೆಗೆ ಯಾವಾಗ ಮರಳುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.