
ಬೆಂಗಳೂರು (ಅ.2): ಮಾಧ್ಯಮ ಕ್ಷೇತ್ರದಲ್ಲಿ ನಿರೂಪಕಿಯಾಗಿ, ರಿಯಾಲಿಟಿ ಶೋ ಹಾಗೂ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಅವರಿಗೆ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದಲ್ಲಿ ಮಹತ್ವದ ಜವಾಬ್ದಾರಿ ಸಿಕ್ಕಿದೆ. ಜಾಹ್ನವಿ ಅವರನ್ನು ಜೆಡಿಎಸ್ ಪಕ್ಷದ 'ರಾಜ್ಯ ಪ್ರಧಾನ ಕಾರ್ಯದರ್ಶಿ'ಯಾಗಿ ನೇಮಕ ಮಾಡಿ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪಕ್ಷದ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರಿಂದ ನೇಮಕಾತಿ ಪತ್ರವನ್ನು ಸ್ವೀಕರಿಸಿದ ಜಾಹ್ನವಿ, ಸಚಿವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಪಕ್ಷದ ಸಂಘಟನೆ ಹಾಗೂ ಬಲವರ್ಧನೆ ಕುರಿತು ಹಲವು ಸಲಹೆ-ಸೂಚನೆಗಳನ್ನು ನೀಡಿದರು.
ಟಿವಿಯಲ್ಲಿ ನ್ಯೂಸ್ ಆಂಕರ್ ಆಗಿ ವೃತ್ತಿಜೀವನ ಆರಂಭಿಸಿದ್ದ ಜಾಹ್ನವಿ, ತದನಂತರ ಕಿರುತೆರೆಯ ಶೋಗಳು, ರಿಯಾಲಿಟಿ ಶೋ ಹಾಗೂ ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಕಳೆದ ಮೇ (2024) ತಿಂಗಳಿನಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ಜೆಡಿಎಸ್ ಪಕ್ಷ ಸೇರ್ಪಡೆಯಾಗುವ ಮೂಲಕ ತಮ್ಮ ರಾಜಕೀಯ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದರು.
ಪಕ್ಷಕ್ಕೆ ಬಂದ ಕಡಿಮೆ ಅವಧಿಯಲ್ಲೇ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದ ಬೈರಮಂಗಲದ ರೈತರ ಪರವಾಗಿ ಧ್ವನಿಯೆತ್ತಿ ಗಮನ ಸೆಳೆದಿದ್ದರು. ಬೈರಮಂಗಲದ ಫಲವತ್ತಾದ ಸುಮಾರು 9,500 ಎಕರೆ ಜಮೀನನ್ನು ಸರ್ಕಾರ ಪಡೆದುಕೊಂಡು 'ಗ್ರೇಟರ್ ಬೆಂಗಳೂರು' ಮಾಡಲು ಹೊರಟಿರುವುದನ್ನು ವಿರೋಧಿಸಿ, ಬಿಡದಿ ಟೌನ್‌ಶಿಪ್ ವಿರುದ್ಧದ ಪಾದಯಾತ್ರೆಯಲ್ಲಿ ಯುವ ಹೋರಾಟಗಾರ್ತಿಯಾಗಿ ಮುಂಚೂಣಿಯಲ್ಲಿ ನಿಂತಿದ್ದರು. ಅಲ್ಲದೆ, ರೈತರ ವಿರೋಧದ ನಡುವೆಯೂ ಯೋಜನೆ ಜಾರಿಗೆ ತರಲು ಹೊರಟಿರುವ ಉಪಮುಖ್ಯಮಂತ್ರಿ ಡಿ.ಕಿ. ಶಿವಕುಮಾರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರವಾಗಿಯೇ ಸವಾಲೆಸೆಯುವ ಮೂಲಕ ಪಕ್ಷದಲ್ಲಿ ಪ್ರಭಾವಿ ಯುವ ನಾಯಕಿಯಾಗಿ ಹೊರಹೊಮ್ಮಿದ್ದರು.
ತಮ್ಮ ಹೊಸ ಜವಾಬ್ದಾರಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಜಾಹ್ನವಿ, ತಮ್ಮ ಈ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
"ನ್ಯೂಸ್ ಆಂಕರ್ ಆಗಿ ಆರಂಭವಾದ ನನ್ನ ಬದುಕಿನ ಪಯಣ ಈಗ ಜೆಡಿಎಸ್ ಸಕ್ರಿಯ ಕಾರ್ಯಕರ್ತೆಯಾಗುವವರೆಗೆ ಬಂದು ನಿಂತಿದೆ. ಇದೊಂದು ನನ್ನ ಪಾಲಿಗೆ ಹೊಸ ತಿರುವು ಹಾಗೂ ಸಂತಸದ ಕ್ಷಣ. ನನ್ನ ಮೇಲೆ ನಂಬಿಕೆ ಇಟ್ಟು ಈ ದೊಡ್ಡ ಹುದ್ದೆ ನೀಡಿದ ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಗೂ ಎಚ್.ಡಿ. ಕುಮಾರಸ್ವಾಮಿ ಅಣ್ಣನವರಿಗೆ ಶಿರಸಾಷ್ಟಾಂಗ ಪ್ರಣಾಮಗಳು. ಹಾಗೆಯೇ ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ಗ್ರೇಟರ್ ಬೆಂಗಳೂರು ಅಧ್ಯಕ್ಷ ರಮೇಶ್ ಗೌಡ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದಿದ್ದಾರೆ.
"ಹುದ್ದೆಯನ್ನು ಹೊಂದುವುದು ಮಾತ್ರ ನಮ್ಮ ಗುರಿಯಾಗಬಾರದು, ಬದಲಿಗೆ ಆ ಹುದ್ದೆಗೆ ಸೂಕ್ತ ನ್ಯಾಯ ಒದಗಿಸುವುದು ನಮ್ಮ ಆದ್ಯತೆಯಾಗಬೇಕು ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ. ನನ್ನನ್ನು ಗುರುತಿಸಿ ಈ ಸ್ಥಾನ ನೀಡಿದ ಪಕ್ಷಕ್ಕಾಗಿ ಮನಸಾರೆ ಹಾಗೂ ಪ್ರಾಮಾಣಿಕವಾಗಿ ದುಡಿಯುತ್ತೇನೆ. ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಮಾಧ್ಯಮ ಕ್ಷೇತ್ರಕ್ಕೂ ಆಭಾರಿಯಾಗಿದ್ದೇನೆ. ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡು, ನಿರಂತರವಾಗಿ ರೈತಪರ, ಮಹಿಳಾಪರ ಹಾಗೂ ಜನಪರ ಕೆಲಸಗಳನ್ನು ಮಾಡಲು ಬದ್ಧಳಾಗಿದ್ದೇನೆ" ಎಂದು ಜಾಹ್ನವಿ ಸಂಕಲ್ಪ ತೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.